
ಹಾವೇರಿ: ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇತ್ತೀಚೆಗೆ ನಡೆದಿದ್ದ ಸಿನೆಮಾ ಮಾದರಿಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಹಾವೇರಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 40 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಥಾರ್ ಮತ್ತು ಸ್ವಿಫ್ಟ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋಧಾ ವಂಟಗೋಡಿ ಅವರು ಈ ಕುರಿತು ವಿವರ ನೀಡಿದರು.
ನಂಬಿದವನೇ ನಡುನೀರಲ್ಲಿ ಕೈಬಿಟ್ಟ: ಕ್ಲೀನರ್ ಅನ್ವರ್ ಮಾಸ್ಟರ್ ಮೈಂಡ್!
ತನಿಖೆಯ ವೇಳೆ ಪೊಲೀಸರಿಗೆ ಅಚ್ಚರಿಯ ಸತ್ಯವೊಂದು ಬಯಲಾಗಿದೆ. ದರೋಡೆಗೊಳಗಾದ ಲಾರಿಯ ಸಹ-ಚಾಲಕ (ಕ್ಲೀನರ್) ಅನ್ವರ್ ಮುಕ್ತುಮಸಾಬ್ ಎಂಬಾತನೇ ಈ ಇಡೀ ದರೋಡೆಯ ಮುಖ್ಯ ರೂವಾರಿ ಎಂಬುದು ಸಾಬೀತಾಗಿದೆ. ಲಾರಿಯಲ್ಲಿ ಲಕ್ಷಾಂತರ ರೂಪಾಯಿ ಹಣವಿರುವ ವಿಷಯವನ್ನು ತನ್ನ ಸಹಚರರಿಗೆ ಫೋನ್ ಮೂಲಕ ರವಾನಿಸಿದ್ದ ಅನ್ವರ್, ಲಾರಿ ಎಲ್ಲಿದೆ ಎಂಬ ನಿಖರ ಮಾಹಿತಿಯನ್ನು ಹಂಚಿಕೊಂಡಿದ್ದ. ಈ ಕರೆಯ ಜಾಡನ್ನು ಹಿಡಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಬಂಧಿತರನ್ನು ಧಾರವಾಡದ ಅನ್ವರ್ ಮುಕ್ತುಮಸಾಬ್ (30), ಹಿರೇಕುಂಬಿಯ ಹಜರತ್ತಲಿ ಮುಕ್ತುಮಸಾಬ ಲಗಳಿ (30), ಅಮೀರಖಾನ್ ಅಬ್ದುಲ್ ಖಾನ್ ಪಠಾಣ (32), ಕಿತ್ತೂರಿನ ಇಬ್ರಾಹಿಂರಿಯಾಜ್ ಅಹಮ್ಮದ್ ಬೀಡಿ (28), ಹುಬ್ಬಳ್ಳಿಯ ಆಸ್ಪಕ್ ಬಾಬುಲಾಲ ಚನ್ನಾಪುರ (33), ಸದ್ದಾಂ ಮಹಮ್ಮದ್ ರಫೀಕ್ ಹಕೀಮ (33), ರಫೀಕ್ ಗುಡುಸಾಬ ಎಲಿಗಾರ (33), ಆಸಕ್ ಮಹಬೂಬಸಾಬ ಮಕಾಂದಾರ (33) ಮತ್ತು ಜಪಾನ್ ಮಹಬೂಬಸಾಬ ಕಂಚಗಾರ (32) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಮಾರ್ಚ್ 27ರ ತಡರಾತ್ರಿ 11.45ರ ಸುಮಾರಿಗೆ ಚಾಲಕ ಶರಣಪ್ಪ ಲಾರಿಯನ್ನು ಚಲಾಯಿಸುತ್ತಿದ್ದರು. ಮಾಲೀಕ ರಿಯಾಜ್ ಅಹಮ್ಮದ್ ಹಣಸಿ ಹಾಗೂ ಕ್ಲೀನರ್ ಅನ್ವರ್ ಕೂಡ ಲಾರಿಯಲ್ಲಿದ್ದರು. ಮೋಟೆಬೆನ್ನೂರು ಬಳಿ ಕಾರಿನಲ್ಲಿ ಅಡ್ಡಗಟ್ಟಿದ ದರೋಡೆಕೋರರ ತಂಡ, ಚಾಲಕ ಹಾಗೂ ಮಾಲೀಕರನ್ನು ಬೆದರಿಸಿ ಲಾರಿಯ ಟೂಲ್ ಬಾಕ್ಸ್ನಲ್ಲಿದ್ದ ಹಣದ ಬ್ಯಾಗ್ ಹಾಗೂ ಮೊಬೈಲ್ಗಳನ್ನು ಕಿತ್ತುಕೊಂಡು ಪರಾರಿಯಾಗಿತ್ತು.
ತನಿಖೆ ಮುಂದುವರಿಕೆ: ಹಣದ ಮೂಲ ಯಾವುದು?
ದೂರಿನಲ್ಲಿ ಲಾರಿಯಲ್ಲಿದ್ದ ನಿಖರವಾದ ಹಣದ ಮೊತ್ತವನ್ನು ಉಲ್ಲೇಖಿಸಿರಲಿಲ್ಲ. ಹುಬ್ಬಳ್ಳಿಯ ವಿನೋದ ರಾಠೋಡ ಎಂಬುವವರು ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ನೀಡಿದ್ದ ಹಣ ಇದಾಗಿತ್ತು ಎಂದು ಹೇಳಲಾಗಿದ್ದರೂ, ಇಷ್ಟು ದೊಡ್ಡ ಮೊತ್ತದ ಹಣವನ್ನು ಟೂಲ್ ಬಾಕ್ಸ್ನಲ್ಲಿ ಸಾಗಿಸುತ್ತಿದ್ದದ್ದು ಪೊಲೀಸರಲ್ಲಿ ಅನುಮಾನ ಮೂಡಿಸಿದೆ. ಈ ನಿಟ್ಟಿನಲ್ಲಿ ವಿನೋದ ರಾಠೋಡ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
“ಹೆದ್ದಾರಿ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಇನ್ನು ಮುಂದೆ NH-48ರಲ್ಲಿ ಭದ್ರತೆಗಾಗಿ 8 ವಿಶೇಷ ವಾಹನಗಳು, 112 ವಾಹನಗಳು ಹಾಗೂ ಓರ್ವ ಪಿಎಸ್ಐ ನೇತೃತ್ವದ ಪ್ರತ್ಯೇಕ ತಂಡ 24 ಗಂಟೆಗಳ ಕಾಲ ಗಸ್ತು ತಿರುಗಲಿದೆ.”
— ಯಶೋಧಾ ವಂಟಗೋಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾವೇರಿ.

