ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಎಚ್. ಕೆ. ಪಾಟೀಲ

Spread the love

ಅಣ್ಣಿಗೇರಿ: “ಗ್ರಾಮಗಳು ನಮ್ಮ ದೇಶದ ಆತ್ಮಗಳಿದ್ದಂತೆ. ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಹೇಳಿದರು.

​ತಾಲೂಕಿನ ನಲವಡಿ ಗ್ರಾಮದಲ್ಲಿ ಶನಿವಾರ ನೂತನವಾಗಿ ನಿರ್ಮಿಸಲಾದ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ತಮಗಿರುವ ವಿಶೇಷ ಆಸಕ್ತಿಯನ್ನು ವ್ಯಕ್ತಪಡಿಸಿದ ಸಚಿವರು, “ಪಂಚಾಯತಿ ಎಂದರೆ ನನಗೆ ಪ್ರೀತಿ ಮತ್ತು ಪ್ರಾಣವಿದ್ದಂತೆ. ರಾಜ್ಯದಲ್ಲಿರುವ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾನೂನು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಿದೆ. ಪಂಚಾಯತಿಯ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು” ಎಂದರು.

ಮಾದರಿ ಗ್ರಾಮಕ್ಕೆ ಕರೆ:

ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಪ್ರತಿ ಮನೆಗೂ ಶೌಚಾಲಯ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರು, ಎಲ್ಲ ಸಮುದಾಯಗಳಿಗೂ ಸುಸಜ್ಜಿತ ಸ್ಮಶಾನ ಹಾಗೂ ಸಹಕಾರ ಸಂಸ್ಥೆಗಳ ಏಳಿಗೆಗೆ ಪಂಚಾಯತಿ ಒತ್ತು ನೀಡಬೇಕು ಎಂದು ಅಧ್ಯಕ್ಷ-ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು. ಅಲ್ಲದೆ, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಲಭ್ಯವಿರುವ ಎಲ್ಲ ಸೇವೆಗಳನ್ನು ಜನರಿಗೆ ತಲುಪಿಸಲು ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಶಾಸಕ ಕೋನರಡ್ಡಿ ಕಾರ್ಯವೈಖರಿಗೆ ಪ್ರಶಂಸೆ:

ಕ್ಷೇತ್ರದ ಶಾಸಕ ಎನ್. ಎಚ್. ಕೋನರಡ್ಡಿ ಅವರ ಅಭಿವೃದ್ಧಿ ಕೆಲಸಗಳು ರಾಜ್ಯಕ್ಕೇ ಮಾದರಿ ಎಂದು ಬಣ್ಣಿಸಿದ ಸಚಿವರು, “ಕೋನರಡ್ಡಿ ಅವರು ಅಭಿವೃದ್ಧಿ ಕೆಲಸಗಳಿಗಾಗಿ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಅನುದಾನ ತರುವಲ್ಲಿ ಚಾಣಾಕ್ಷರು. ಅವರು ನಿರ್ಮಿಸುತ್ತಿರುವ ರಸ್ತೆಗಳು ಕೇವಲ ಚಕ್ಕಡಿ ರಸ್ತೆಗಳಲ್ಲ, ಅವು ಸುಸಜ್ಜಿತ ಪಕ್ಕಾ ರಸ್ತೆಗಳಾಗಿವೆ” ಎಂದು ಶ್ಲಾಘಿಸಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್. ಎಚ್. ಕೋನರಡ್ಡಿ, “ಕ್ಷೇತ್ರವನ್ನು ಮಾದರಿಯಾಗಿಸಲು ಹೊಲದ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ನೂತನ ಕಟ್ಟಡದ ಸದುಪಯೋಗ ಪಡೆದುಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು” ಎಂದರು.

ಗಣ್ಯರ ಉಪಸ್ಥಿತಿ:

ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಜಿಪಂ ಸಿಇಒ ಭುವನೇಶ ಪಾಟೀಲ್, ತಹಶೀಲ್ದಾರ್ ಮಂಜುನಾಥ್ ದಾಸಪ್ಪನವರ, ತಾಪಂ ಇಒ ಪಿ. ಆರ್. ಬಡೇಖಾನವರ, ಪಿಡಿಒ ಆನಂದ ನಾವಳ್ಳಿ ಉಪಸ್ಥಿತರಿದ್ದರು.

​ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಕ್ಕ ತಳವಾರ, ಉಪಾಧ್ಯಕ್ಷ ನಿತಿನಕುಮಾರ ಗಾಣಗೇರ ಹಾಗೂ ಸದಸ್ಯರಾದ ಕಾಶವ್ವ ಮಂಟೂರ, ವೆಂಕನಗೌಡ ಪಾಟೀಲ, ಸವಿತಾ ಪಾಟೀಲ, ಬಸಪ್ಪ ಗಾಣಿಗೇರ, ಶ್ರೀನಿವಾಸ ದೊಡ್ಡಗೌಡ್ರ, ಕಸ್ತೂರಿ ಹರ್ತಿ, ಅನುಸೂಯಾ ಮಾದರ, ಗೀತಾ ಪಾಟೀಲ, ಅನಿತಾ ಗರಗದ, ಚನ್ನಬಸಪ್ಪ ಪಟ್ಟೇದ, ಪ್ರಭಾವತಿ ಹಳೆಮನಿ, ಶಾಂತವೀರನಗೌಡ ಪಾಟೀಲ, ಮಹದೇವಪ್ಪ ಡೊಳ್ಳಿನ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಮಹಾಂತೇಶ ಹಕ್ಕರಕಿ, ಅಣ್ಣಿಗೇರಿ.

Leave a Reply

Your email address will not be published. Required fields are marked *