
ಧಾರವಾಡ: ಗಳಗನಾಥರು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರರು. ಮರಾಠಿ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ತಮ್ಮ ಕಾದಂಬರಿಗಳ ಮೂಲಕ ನಾಡಿನಾದ್ಯಂತ ಸಾಹಿತ್ಯ ಪ್ರಸಾರ ಮಾಡಿ, ಕನ್ನಡಿಗರಲ್ಲಿ ಭಾಷಾ ಜಾಗೃತಿ ಮೂಡಿಸಿದರು ಎಂದು ನಿವೃತ್ತ ಉಪನ್ಯಾಸಕ ಸಿ. ಆರ್. ಜೋಶಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು ಹಾಗೂ ಸಂಶೋಧಕ ಶ್ರೀ ನಾ. ಶ್ರೀ. ರಾಜಪುರೋಹಿತರ ಸ್ಮರಣಾರ್ಥ ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಬದುಕು-ಬರಹ’ ವಿಷಯದ ಕುರಿತು ಅವರು ಮಾತನಾಡಿದರು.
ಮರಾಠಿ ಪ್ರಭಾವವಿದ್ದ ಆ ಕಾಲದಲ್ಲಿ ಕನ್ನಡಿಗರು ಅನಿವಾರ್ಯವಾಗಿ ಮರಾಠಿ ಪತ್ರಿಕೆಗಳನ್ನು ಓದಬೇಕಿತ್ತು. ಲೋಕಮಾನ್ಯ ಟಿಳಕ ಹಾಗೂ ಹರಿನಾರಾಯಣ ಆಪ್ಟೆಯವರ ಚಿಂತನೆಗಳಿಂದ ಪ್ರಭಾವಿತರಾದ ಗಳಗನಾಥರು, ಆಪ್ಟೆಯವರ ಕಾದಂಬರಿಗಳನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಲ್ಲಿ ಓದುವ ಆಸಕ್ತಿ ಬೆಳೆಸಿದರು. ಕ.ವಿ.ವ ಸಂಘವು ಗ್ರಂಥಕರ್ತರಿಗೆ ಬಹುಮಾನ ನೀಡುವ ಪರಂಪರೆ ಪ್ರಾರಂಭಿಸಿದಾಗ, ‘ಪ್ರಬುದ್ಧ ಪದ್ಮನಯನ’ ಎಂಬ ತಮ್ಮ ಮೊದಲ ಕಾದಂಬರಿಯನ್ನು ಬರೆದು ೨೫ ರೂಪಾಯಿ ಬಹುಮಾನ ಪಡೆದರು. ಒಟ್ಟು ೨೪ ಕಾದಂಬರಿಗಳನ್ನು ಬರೆದು ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದರು.
ಸಂಚಾರಿ ಪುಸ್ತಕ ಮಾರಾಟಗಾರರಾಗಿದ್ದ ಗಳಗನಾಥರು:
ಗಳಗನಾಥರು ಶಿಕ್ಷಕ ವೃತ್ತಿಯಲ್ಲಿದ್ದಾಗ ‘ಸದ್ಭೋದ ಚಂದ್ರಿಕೆ’ ಪತ್ರಿಕೆಯನ್ನು ಪ್ರಾರಂಭಿಸಿದರು, ಅದು ಆ ಕಾಲದಲ್ಲೇ ೭ ಸಾವಿರ ಚಂದಾದಾರರನ್ನು ಹೊಂದಿತ್ತು. ಆದರೂ ಬಡತನ ಮತ್ತು ಸಾಲದ ಬಾಧೆಯಿಂದ ಬಳಲಿದ ಅವರು, ಸಾಲ ತೀರಿಸಲು ಪುಸ್ತಕಗಳ ಗಂಟನ್ನು ಹೊತ್ತು ಊರೂರು ಅಲೆದರು. ಓಣಿ-ಓಣಿಗಳಲ್ಲಿ ಸಂಚರಿಸಿ ಕಾದಂಬರಿ ಮಾರಾಟ ಮಾಡಿದರು. ಈ ಹಾದಿಯಲ್ಲಿ ಅವರು ಹಲವು ಅವಮಾನಗಳನ್ನೂ ಸಹಿಸಬೇಕಾಯಿತು ಎಂದು ಜೋಶಿ ಸ್ಮರಿಸಿದರು.
ಇತಿಹಾಸದ ಸತ್ಯ ಶೋಧಿಸಿದ ರಾಜಪುರೋಹಿತರು:
ಇನ್ನೋರ್ವ ಮಹಾನ್ ಚೇತನ ನಾ. ಶ್ರೀ ರಾಜಪುರೋಹಿತರ ಕುರಿತು ಮಾತನಾಡಿದ ಅವರು, ಮರಾಠಿ ಪ್ರಭಾವದ ನಡುವೆ ಕನ್ನಡ ಉಳಿಸಲು ರಾಜಪುರೋಹಿತರು ಇತಿಹಾಸ ಸಂಶೋಧನಾ ಕಾರ್ಯ ಕೈಗೊಂಡರು. ಆಲೂರ ವೆಂಕಟರಾಯರ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದ ಅವರು, ಮುಂದೆ ‘ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ’ಯನ್ನು ಸ್ಥಾಪಿಸಿದರು. ಇಡೀ ನಾಡಿನಾದ್ಯಂತ ಸಂಚರಿಸಿ ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳ ಮೂಲಕ ಇತಿಹಾಸವನ್ನು ಕಟ್ಟಿಕೊಟ್ಟರು. ಮುಖ್ಯವಾಗಿ, ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ನಡೆದ ಸ್ಥಳ ತಾಳಿಕೋಟಿ ಅಲ್ಲ, ಅದು ‘ರಕ್ಕಸತಂಗಡಗಿ’ ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಿದರು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಈ ಇಬ್ಬರೂ ಪ್ರಾತಃಸ್ಮರಣೀಯರ ಬದುಕು-ಬರಹಗಳನ್ನು ಓದಬೇಕು. ಗಳಗನಾಥರು ಹೊಸಗನ್ನಡ ಗದ್ಯದ ಆದ್ಯ ಪ್ರವರ್ತಕರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿಯ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಟ್ರಸ್ಟ್‌ನ ಸದಸ್ಯರಾದ ವೆಂಕಟೇಶ ಗಳಗನಾಥ ಹಾಗೂ ಹನಮಂತಗೌಡ ಗೊಲ್ಲರ ಅವರು ಸಂಘಕ್ಕೆ ಮಹನೀಯರ ಭಾವಚಿತ್ರಗಳನ್ನು ಸಮರ್ಪಿಸಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರೆ, ಡಾ. ಧನವಂತ ಹಾಜವಗೋಳ ವಂದಿಸಿದರು. ಸಮಾರಂಭದಲ್ಲಿ ಎಂ. ಎಂ. ಚಿಕ್ಕಮಠ, ಸುರೇಶ ಭಂಡಾರಿ, ಶ್ರೀಕಾಂತ ಬನಸೋಳೆ, ಶ್ರೀ ಹಡಪದ, ಎಂ. ಬಿ. ಹೆಗ್ಗೇರಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

