
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ; ಪಡಿತರ ವಿತರಣೆ, ಗೃಹಲಕ್ಷ್ಮಿ ಅನುಷ್ಠಾನದ ಬಗ್ಗೆ ಮಹತ್ವದ ಸೂಚನೆ
ಧಾರವಾಡ: ನವೆಂಬರ್ 25: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಬಸ್ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಬಸ್ ಸಮಸ್ಯೆಯನ್ನು ನಿವಾರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಧಾರವಾಡ ತಾಲ್ಲೂಕು ಅಧ್ಯಕ್ಷ ಅರವಿಂದ ಏಗನಗೌಡರ ಅವರು ಸೂಚನೆ ನೀಡಿದರು.
ಅವರು ನಿನ್ನೆ (ನ.24) ಬೆಳಿಗ್ಗೆ ಧಾರವಾಡ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸೂಚನೆಗಳು:
- ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮಿ ಫಲಾನುಭವಿಗಳು ನಿಧನರಾದ ನಂತರವೂ ಹಣ ಜಮೆಯಾಗಿದ್ದರೆ, ಅಂತಹವರನ್ನು ಗುರುತಿಸಿ, ಆ ಹಣವನ್ನು ಮರಳಿ ಸರ್ಕಾರಕ್ಕೆ ನೀಡುವಂತೆ ತಿಳುವಳಿಕೆ ನೀಡಬೇಕು ಎಂದು ಏಗನಗೌಡರ ಅವರು ಸೂಚಿಸಿದರು.
- ಪಡಿತರ ಮತ್ತು ಕಾರ್ಡ್ಗಳು: ಐಟಿ ಮತ್ತು ಜಿಎಸ್ಟಿ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಿಗೆ ಬದಲಾಯಿಸುವ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ವಿತರಣೆಯಾಗುತ್ತಿಲ್ಲ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಪೌಷ್ಟಿಕ ಆಹಾರಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ಯೋಜನೆಗಳ ಪ್ರಗತಿ:
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಲಾಯಿತು.
- ಶಕ್ತಿ ಯೋಜನೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ವ್ಯಾಪ್ತಿಯಲ್ಲಿ, ಸೆಪ್ಟೆಂಬರ್ 2025 ರಲ್ಲಿ ಶಹರ ವಿಭಾಗದಲ್ಲಿ ಒಟ್ಟು 41,98,219 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 6,67,92,48 ರೂಪಾಯಿಗಳ ಆದಾಯ ಬಂದಿದೆ. ನವೆಂಬರ್ 2025 ರಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 5,04,027 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 1,66,82,966 ರೂಪಾಯಿಗಳ ಆದಾಯ ಸಂಗ್ರಹವಾಗಿದೆ.
- ಗೃಹ ಲಕ್ಷ್ಮೀ ಯೋಜನೆ: ಗ್ರಾಮೀಣ ವ್ಯಾಪ್ತಿಯಲ್ಲಿ ನೋಂದಾಯಿತ 53,543 ಅರ್ಹ ಫಲಾನುಭವಿಗಳ ಪೈಕಿ 53,391 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 2,34,92,04,000 ರೂಪಾಯಿಗಳು ಸಂದಾಯವಾಗಿದೆ. ಶಹರ ವ್ಯಾಪ್ತಿಯಲ್ಲಿ 27,020 ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದು, ಇಲ್ಲಿಯವರೆಗೆ 1,18,88,80,000 ರೂಪಾಯಿಗಳು ಸಂದಾಯವಾಗಿದೆ.
- ಅನ್ನಭಾಗ್ಯ ಯೋಜನೆ: ಗ್ರಾಮೀಣ ಭಾಗದಲ್ಲಿ 52,333 ಪಡಿತರ ಚೀಟಿಗಳು ಇವೆ. ಈ ತಿಂಗಳು ಹೊಸ ಪಡಿತರ ಚೀಟಿಗೆ 1,603 ಅರ್ಜಿಗಳು ಪರಿಶೀಲನಾ ಹಂತದಲ್ಲಿ ಬಾಕಿ ಇವೆ. ಶಹರ ವ್ಯಾಪ್ತಿಯಲ್ಲಿ 32 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಪಿಎಚ್ಎಚ್ (ಬಿಪಿಎಲ್) ಕಾರ್ಡ್ದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ (ಎನ್ಎಫ್ಎಸ್ಎ 5 ಕೆಜಿ + ಅನ್ನಭಾಗ್ಯ 5 ಕೆಜಿ) ಅಕ್ಕಿಯನ್ನು ವಿತರಿಸಲಾಗುತ್ತಿದೆ.
- ಗೃಹಜ್ಯೋತಿ ಯೋಜನೆ: ಧಾರವಾಡ ಶಹರ ವ್ಯಾಪ್ತಿಯಲ್ಲಿ 32,088 ಅರ್ಹ ಫಲಾನುಭವಿಗಳ ಪೈಕಿ 28,620 ಫಲಾನುಭವಿಗಳು ಯೋಜನೆಯ ವ್ಯಾಪ್ತಿಯಲ್ಲಿದ್ದು, ಇಲ್ಲಿಯವರೆಗೆ 3,376.12 ಲಕ್ಷ ರೂಪಾಯಿಗಳು ಖರ್ಚಾಗಿವೆ. ಗ್ರಾಮೀಣ ವ್ಯಾಪ್ತಿಯಲ್ಲಿ 55,326 ಅರ್ಹ ಫಲಾನುಭವಿಗಳ ಪೈಕಿ 51,570 ಫಲಾನುಭವಿಗಳು ಯೋಜನೆಯಲ್ಲಿದ್ದು, ಇಲ್ಲಿಯವರೆಗೆ 4,292.99 ಲಕ್ಷ ರೂಪಾಯಿಗಳು ಖರ್ಚಾಗಿವೆ.
- ಯುವನಿಧಿ ಯೋಜನೆ: ಒಟ್ಟು 3,206 ನೋಂದಣಿಗಳು ಆಗಿದ್ದು, ಪದವಿ ವಿದ್ಯಾರ್ಥಿಗಳಿಗೆ 6,46,35,000 ರೂಪಾಯಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 5,89,500 ರೂಪಾಯಿ ಸೇರಿದಂತೆ ಒಟ್ಟು 6,52,24,500 ರೂಪಾಯಿಗಳನ್ನು ವಿತರಿಸಲಾಗಿದೆ.
ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ ಕದಂ, ಪರಮೇಶ್ವರ ಕರಿಕಟ್ಟಿ, ಮಂಜುನಾಥ ಉಡಿಕೇರಿ ಸೇರಿದಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

