
ಧಾರವಾಡ : ಬೆಂಬಲ ಬೆಲೆ ಯೋಜನೆಯಡಿ ಕಾಳು ಖರೀದಿಗೆ ನೋಂದಣಿ ಮಾಡಿಕೊಳ್ಳುವ ಕೇಂದ್ರಗಳಲ್ಲಿ ರೈತರಿಂದ ಅನಧಿಕೃತವಾಗಿ ಹಣ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಉಚಿತವಾಗಿರುವ ನೋಂದಣಿಗೆ ಹಣ ಪಡೆದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಧಾರವಾಡ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ ಅವರು ಇಂದು (ಅ.27) ಬೆಳಿಗ್ಗೆ ಉಪ್ಪಿನಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಉಪ್ಪಿನಬೆಟಗೇರಿಯ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಬೀಜ, ಗೊಬ್ಬರ ಮಾರಾಟ ಹಾಗೂ ಕೃಷಿ ಉತ್ಪನ್ನ ಖರೀದಿ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅವರು ಪರಿಶೀಲಿಸಿ ಸಭೆ ಜರುಗಿಸಿದರು. ಈ ಸಂದರ್ಭದಲ್ಲಿ ಕೃ.ಪ.ಸ.ಸಂಘದ ಅಭಿವೃದ್ಧಿ ನಿಧಿ ಹಾಗೂ ಕಟ್ಟಡ ಭವಿಷ್ಯತ್ ನಿಧಿಗೆ 100 ಹೆಚ್ಚುವರಿ ಶುಲ್ಕ ವಿಧಿಸಿ ರಶೀದಿ ನೀಡುತ್ತಿರುವುದು ಕಂಡುಬಂದಿದೆ.
ಇದಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದನ್ನು ಈ ಕೂಡಲೇ ನಿಲ್ಲಿಸುವುದಾಗಿ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ತಹಶೀಲ್ದಾರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ಅಮ್ಮಿನಭಾವಿ ಕಂದಾಯ ನಿರೀಕ್ಷಕ ಗುರು ಒಡೆಯರ, ಸೊಸೈಟಿಯ ಸದಸ್ಯರು ಹಾಗೂ ರೈತರು ಹಾಜರಿದ್ದರು.

