ಬಸ್ ಇಲ್ಲದೆ ವಿದ್ಯಾರ್ಥಿನಿಯರ ಪರದಾಟ, ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳ ಹಾವಳಿ – ಪೊಲೀಸ್ ಇಲಾಖೆಯ ಜಾಣ ಮೌನ!

Spread the love

ಕುಂದಗೋಳ: ತಾಲೂಕಿನ ದೇವನೂರು ಗ್ರಾಮದ ವಿದ್ಯಾರ್ಥಿನಿಯರು ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ಸೋಮವಾರ ಸಂಜೆ ವೇಳೆಗೆ ಪರಿತಪಿಸುವಂತ ವಾತಾವರಣ ನಿರ್ಮಾಣವಾಗಿತ್ತು. ಇದಲ್ಲದೆ ಪ್ರತಿದಿನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಸುರಕ್ಷತೆ ಇಲ್ಲದ ಕಾರಣ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿನಿಯರು ಭಯದ ನೆರಳಿನಲ್ಲಿ ದಿನ ಕಳೆಯುವಂತಾಗಿದೆ. ಈ ಗಂಭೀರ ಸಮಸ್ಯೆಯ ಕುರಿತು ಪೊಲೀಸ್ ಇಲಾಖೆಯು ತೋರುತ್ತಿರುವ “ಜಾಣ ಮೌನ” ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮನೆ ಬಿಡುವ ವಿದ್ಯಾರ್ಥಿನಿಯರು, ಶಾಲಾ ಅವಧಿ ಮುಗಿದ ಬಳಿಕ ಊರಿಗೆ ಮರಳಲು ಸರಿಯಾದ ಬಸ್ ಇಲ್ಲದೆ ರಾತ್ರಿ 8 ಗಂಟೆಯವರೆಗೆ ಬಸ್ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ನಿಲ್ದಾಣದಲ್ಲಿ ಕುಡುಕರು ಹಾಗೂ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿಬಂದಿವೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕುಂದಗೋಳ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯ ಬೀಟ್ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ. ಕನಿಷ್ಠ ಒಬ್ಬ ಹೋಮ್‌ಗಾರ್ಡ್ ಸಿಬ್ಬಂದಿಯನ್ನು ಸಹ ನೇಮಿಸದ ಇಲಾಖೆಯ ನಡೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಅವರಿಗೆ ಇರುವ ಕಾಳಜಿಯನ್ನೇ ಪ್ರಶ್ನಿಸುವಂತಿದೆ ಎಂದು ವಿದ್ಯಾರ್ಥಿನಿಯರಾದ ಅಂಜಲಿ ಭೈರಪ್ಪನವರ ಹಾಗೂ ಲಲಿತಾ ಮಜ್ಜಿಗುಡ್ಡ ಅಳಲು ತೋಡಿಕೊಂಡಿದ್ದಾರೆ.

10ನೇ ತರಗತಿಯ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಓದಿನಲ್ಲಿ ತೊಡಗಬೇಕಾದ ವಿದ್ಯಾರ್ಥಿನಿಯರು ಅಸುರಕ್ಷಿತ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಭಯದಿಂದ ಕಾಯಬೇಕಾಗಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಅವ್ಯವಸ್ಥೆಯ ಕುರಿತು ಪತ್ರಕರ್ತರೊಬ್ಬರು ದೂರವಾಣಿ ಮೂಲಕ ಪೋಲಿಸ ಪಿಎಸ್‌ಐ ಅವರಿಗೆ ಕರೆ ಮಾಡಿ ಕೊಟ್ಟಾಗ ವಿಧ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಆದರೆ ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯದ ಜೊತೆಗೆ ಪೊಲೀಸ್ ಇಲಾಖೆ ಈ ಭಾಗದಲ್ಲಿ ಗಸ್ತು ತಿರುಗದೇ ಇರುವುದು ಕಿಡಿಗೇಡಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ದೇವನೂರು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆಯೂ ಪ್ರತಿಭಟನೆ ನಡೆದಿದ್ದರೂ ಅಧಿಕಾರಿಗಳು ತಾತ್ಕಾಲಿಕ ಕ್ರಮ ಕೈಗೊಂಡು ಬಳಿಕ ಮೌನಕ್ಕೆ ಶರಣಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಸೂಕ್ತ ಬೀಟ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿನಿಯರಿಗೆ ಭದ್ರತೆ ಒದಗಿಸುತ್ತದೆಯೇ, ಇಲ್ಲವೇ ಯಾವುದೇ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ದೇವನೂರು ಭಾಗಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವುದರ ಜೊತೆಗೆ, ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕೆಂದು ಗ್ರಾಮಸ್ಥರು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *