ವಿದ್ಯಾರ್ಥಿಗಳು ಮೌಲ್ಯಾಧಾರಿತ ಜೀವನ ರೂಪಿಸಿಕೊಳ್ಳಿ: ಶಾಸಕ ಎನ್.ಹೆಚ್. ಕೋನರಡ್ಡಿ

Spread the love

ನವಲಗುಂದ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ಭಾರತ ಸ್ಕೌಟ್ ಮತ್ತು ಗೈಡ್ಸ್‌, ಯುವ ರೆಡ್ ಕ್ರಾಸ್‌ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಮಂಗಳವಾರದಂದು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ವಿದ್ಯೆ ಕಲಿತ ಶಾಲಾ-ಕಾಲೇಜುಗಳೇ ದೇವಾಲಯಗಳು ಎಂದು ಹೇಳಿ, ವಿದ್ಯಾರ್ಥಿಗಳು ಕೇವಲ ಅಂಕಗಳ ಸಾಧನೆಗೆ ಮಾತ್ರ ಸೀಮಿತವಾಗದೇ ಮಾನವೀಯತೆ, ಪ್ರೀತಿ ಮತ್ತು ಅನುಕಂಪದಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. “ಉತ್ತಮ ಸಂಸ್ಕಾರ, ರಾಜ್ಯ ಮತ್ತು ದೇಶದ ಬಗ್ಗೆ ಅಭಿಮಾನ, ಪರಿಸರದ ಶುಚಿತ್ವ ಹಾಗೂ ಶಿಸ್ತಿನ ಜೀವನವು ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯಕ,” ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಅಡಿವೆಪ್ಪ ಚ. ವಾಲಿ (ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಗ್ಗಾಂವ್) ಮಾತನಾಡಿ, “ಮಾತು ಕೃತಿಗೆ ಇಳಿದರೆ ಸಾಧನೆ, ಮಾತೇ ಮಾಣಿಕ್ಯ” ಎಂದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಜ್ಞಾನ ಹಂಚುವ ‘ಮಾಣಿಕ್ಯದ ದೀಪ್ತಿ’ ಆಗಬೇಕು ಎಂದು ಅವರು ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಎಂ.ಬಿ. ಬಾಗಡಿ ಮಾತನಾಡಿ, ಮಹಾವಿದ್ಯಾಲಯದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗುವ ರೀತಿಯಲ್ಲಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಬಂಡಿವಾಡದ ಡಾ. ಎ ಸಿ ವಾಲಿ ಗುರುಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಐ.ಬಿ. ಸಾತಿಹಾಳ ಸ್ವಾಗತಿಸಿದರು, ಡಾ. ಸಂತೋಷ ಹುಬ್ಬಳ್ಳಿ ಪ್ರಸ್ತಾವಿಕ ನುಡಿ ನೀಡಿದರು, ಶ್ರೀ ಶ್ರೀಧರ ಲೋನಕರ್ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಶ್ರೀ ಗಂಗಾಧರ ಗೌಡರ್ ವಂದಿಸಿದರು. ಕುಮಾರಿ ಸಂಜನಾ ಗಣಾಚಾರಿ ಪ್ರಾರ್ಥನೆ ಸಲ್ಲಿಸಿದರು. ಡಾ. ಪ್ರಸನ್ನ ಪಂಢರಿ, ಶ್ರೀ ಬಿ.ವಿ. ಏನಗಿ, ಡಾ. ನಾಗರತ್ನ ಕುರ್ಡೇಕರ್, ಶ್ರೀಮತಿ ಸವಿತಾ ಚಿಕ್ಕಣ್ಣವರ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ನವೀನ ಮರಿಗೌಡ್ರ ನಿರೂಪಿಸಿದರು.

Leave a Reply

Your email address will not be published. Required fields are marked *