​ಮಾದಕ ವ್ಯಸನದಿಂದ ದೂರವಿದ್ದು ಜೀವನದಲ್ಲಿ ಸಾಧನೆ ಮಾಡಿ: ಅಬಕಾರಿ ನಿರೀಕ್ಷಕ ರಾಮು ಆರೆನ್ನವರ ಕರೆ

Spread the love

ನವಲಗುಂದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಅತ್ಯಮೂಲ್ಯವಾದ ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ಇಂತಹ ದುಶ್ಚಟಗಳಿಂದ ಹೊರಬಂದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಬಕಾರಿ ನಿರೀಕ್ಷಕ ರಾಮು ಆರೆನ್ನವರ ತಿಳಿಸಿದರು.

​ಪಟ್ಟಣದ ಶ್ರೀ ಶಂಕರ ಮಹಾವಿದ್ಯಾಲಯದಲ್ಲಿ ಅಬಕಾರಿ ಇಲಾಖೆಯ ವತಿಯಿಂದ ನವಲಗುಂದ ಹಾಗೂ ಅಣ್ಣಿಗೇರಿ ನಗರದ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾನವ ಜನ್ಮವು ಅತ್ಯಂತ ದೊಡ್ಡದಾಗಿದ್ದು, ಗುಟ್ಕಾ, ತಂಬಾಕು, ಸಿಗರೇಟ್, ಗಾಂಜಾ ಹಾಗೂ ಮದ್ಯಪಾನದಂತಹ ವ್ಯಸನಗಳಿಗೆ ದಾಸರಾಗದೆ, ಜೀವನದಲ್ಲಿ ಏನನ್ನಾದರೂ ಸಾಧಿಸುವ ಮೂಲಕ ತಂದೆ-ತಾಯಿ ಹಾಗೂ ಗುರುಗಳಿಗೆ ಕೀರ್ತಿ ತರಬೇಕು ಎಂದು ಅವರು ಸಲಹೆ ನೀಡಿದರು.

​ಧಾರವಾಡ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯ. ನಾವು ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಆದರೆ ಕೆಟ್ಟ ಕೆಲಸಗಳಲ್ಲಿ ತೊಡಗಬಾರದು. ನಿಮ್ಮ ಸುತ್ತಮುತ್ತ ಯಾರಾದರೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಅಥವಾ ಸೇವನೆ ಮಾಡುವುದು ಕಂಡುಬಂದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

​ಶಿಕ್ಷಕ ನಿಂಗನಗೌಡ ನೀಲಪ್ಪಗೌಡ ಮಾತನಾಡಿ, ತಾಲೂಕಿನಲ್ಲಿ ಅಬಕಾರಿ ಇಲಾಖೆಯ ವತಿಯಿಂದ ಮಾದಕ ವ್ಯಸನದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ಸುಮಾರು 135 ವಿದ್ಯಾರ್ಥಿಗಳು ಭಾಗವಹಿಸಿರುವುದು ಶ್ಲಾಘನೀಯ ಎಂದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 5001 ರೂ., ದ್ವಿತೀಯ 3001 ರೂ. ಹಾಗೂ ತೃತೀಯ 2001 ರೂ. ನಗದು ಬಹುಮಾನ ನೀಡಲಾಗುವುದು. ಈ ಬಹುಮಾನಗಳನ್ನು ಜನವರಿ ತಿಂಗಳಲ್ಲಿ ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಶಾಸಕರು ವಿತರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

​ಕಾರ್ಯಕ್ರಮದಲ್ಲಿ ಶ್ರೀ ಶಂಕರ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಬಡಿಗೇರ್, ಅಬಕಾರಿ ಉಪ ನಿರೀಕ್ಷಕರಾದ ಆನಂದ ನಾಗನೂರ ಹಾಗೂ ಅನುರಾಧಾ ಓಲೆಕಾರ್, ಗಣಕಯಂತ್ರ ವಿಭಾಗದ ನಿರ್ದೇಶಕ ಮಹೇಶ್ ಕುರ್ತಕೋಟಿ, ಶಿಕ್ಷಕರಾದ ಸಂತೋಷ್ ಕಿರೇಸೂರ, ಚಂದ್ರು ತಳವಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ, ಅಬಕಾರಿ ಇಲಾಖೆ ಹಾಗೂ ಗೃಹರಕ್ಷಕ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *