
ಮುಧೋಳ:ತಾಲ್ಲೂಕಿನ ಮರಿಕಟ್ಟಿ ಗ್ರಾಮದಲ್ಲಿ ಮಂಗಳವಾರದಂದು (ಅಕ್ಟೋಬರ್ 28,) ನಡೆದ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್. ಬಿ. ತಿಮ್ಮಾಪೂರ ಅವರು ಭಾಗವಹಿಸಿ, ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು. ದೇಶಭಕ್ತಿ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ಈ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಕಿತ್ತೂರ ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ, ಮಹಿಳಾ ಸಬಲೀಕರಣದ ಮೂಲ ಸಿದ್ಧಾಂತವನ್ನು ತೋರಿದ ನಾಯಕಿ. ಇಂತಹ ಮಹಾನ್ ವ್ಯಕ್ತಿಯ ಮೂರ್ತಿ ಗ್ರಾಮದಲ್ಲಿ ನಿಲ್ಲುವುದು ಯುವ ತಲೆಮಾರುಗಳಿಗೆ ಪ್ರೇರಣೆಯಾಗುತ್ತದೆ” ಎಂದು ಶ್ಲಾಘಿಸಿದರು.
ಗ್ರಾಮೀಣ ಅಭಿವೃದ್ಧಿಯ ಕಡೆಗೆ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದ ಸಚಿವರು, ಮರಿಕಟ್ಟಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಅಭಿವೃದ್ಧಿಗಾಗಿ ₹15 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದರು. “ಇದು ಗ್ರಾಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ” ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ ಕಿವಡಿ (ವಕೀಲರು), ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸದುಗೌಡ ಪಾಟೀಲ್, ಮುಧೋಳ ಎಪಿಎಂಸಿ ಅಧ್ಯಕ್ಷರಾದ ಸಂಗಪ್ಪ ಇಮ್ಮನ್ನವರ, ಶ್ರೀ ಬಸನಗೌಡ, ಶ್ರೀ ಮಲ್ಲನಗೌಡ, ಶ್ರೀ ರಮೇಶ ಜೀರಗಾಳ, ಶ್ರೀ ಶೇಖರ ಸೂರಮಂಜಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

