
ಧಾರವಾಡ, ನ.20: “ಪೊಲೀಸರು ದಿನವೂ ಒತ್ತಡಭರಿತ ಪರಿಸ್ಥಿತಿಗಳನ್ನು ಎದುರಿಸುವುದು ಸಾಮಾನ್ಯ. ಇಂತಹ ಒತ್ತಡವನ್ನು ಕಡಿಮೆ ಮಾಡುವ ಉತ್ತಮ ಮಾರ್ಗಗಳಲ್ಲಿ ಕ್ರೀಡೆ ಹಾಗೂ ವ್ಯಾಯಾಮಗಳು ಪ್ರಮುಖ. ಕ್ರೀಡೆಗಳು ಪ್ರತಿದಿನ ಮನಸ್ಸಿಗೆ ಹೊಸ ಚೈತನ್ಯ ಮತ್ತು ಸಂತಸ ನೀಡುತ್ತವೆ,” ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಧಾರವಾಡ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನ ಡಿಎಆರ್ ಪರೇಡ್ ಮೈದಾನದಲ್ಲಿ, ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಧೀಶೆ ಭಾರತಿ ಮುಂದುವರೆದು, “ಕ್ರೀಡೆ ಯಾವಾಗಲೂ ನಮ್ಮಲ್ಲಿ ಉತ್ಸಾಹ ತುಂಬುತ್ತದೆ. ಸೋಲು–ಗೆಲುವಿನ ಕ್ರೀಡಾ ಮನೋಭಾವವನ್ನು ಬದುಕಿನ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಜೀವನದ ಎಲ್ಲಾ ಕಾರ್ಯಗಳಲ್ಲಿ ಗೆಲುವು ಸಾಧ್ಯವಿಲ್ಲ; ಕೆಲವೊಮ್ಮೆ ಸೋಲನ್ನು ಅನುಭವಿಸಲೇಬೇಕು. ಆದರೆ ಸೋಲನ್ನೂ ಗೆಲುವಿನಂತೆ ಸಮಾನ ಮನೋಭಾವದಿಂದ ಸ್ವೀಕರಿಸಿದಾಗ ಜೀವನ ಸಮತೋಲನವಾಗುತ್ತದೆ,” ಎಂದು ಹೇಳಿದರು.
ಪೊಲೀಸರು ಹೆಚ್ಚಿನ ಸಮಯವನ್ನು ಕರ್ತವ್ಯ ಹಾಗೂ ಇಲಾಖಾ ಕಾರ್ಯಗಳಲ್ಲಿ ಕಳೆಯುವುದರಿಂದ ಮನಸ್ಸಿಗೆ ವಿಶ್ರಾಂತಿ ಅಗತ್ಯವಿದೆ. “ಇಂತಹ ಕ್ರೀಡಾಕೂಟಗಳು ಪೊಲೀಸರಿಗೆ ಮಾನಸಿಕ ತಾಜಾತನ ಮತ್ತು ಹೊಸ ಚೈತನ್ಯವನ್ನು ತುಂಬುತ್ತವೆ,” ಎಂದೂ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭದ್ರಾ, ತುಂಗಾ, ಕೃಷ್ಣ, ವರದಾ, ಕಾವೇರಿ ಮತ್ತು ಶಲ್ಮಲಾ ತಂಡಗಳ ನಾಯಕರು ತಮ್ಮ ತಂಡಗಳ ಜೊತೆ ಆಕರ್ಷಕ ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ಸಲ್ಲಿಸಿದರು. ಭದ್ರಾ ತಂಡದ RSI ಗಿರೀಶ ಜುಂಜೂರಿ, ತುಂಗಾ ತಂಡದ ಮಹಿಳಾ PSI ನಿರ್ಮಲಾ ಜಂಬಗಿ, ಕೃಷ್ಣ ತಂಡದ PSI ಪ್ರವೀಣ ಕೋಟಿ, ವರದಾ ತಂಡದ PSI ಅಭಿಜೀತ್, ಕಾವೇರಿ ತಂಡದ PSI ನೇತ್ರಾವತಿ ಪವಾರ ಹಾಗೂ ಶಲ್ಮಲಾ ತಂಡದ PSI ಉಮೇಶ ಕಮತಿ ಈ ಪಥಸಂಚಲನದಲ್ಲಿ ಪಾಲ್ಗೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಆರ್‌ಎಸ್‌ಐ ವಿ.ಎಂ. ದೊಡಮನಿ ಮತ್ತು ಎ.ಎಫ್. ಜಿಲ್ಲೇನವರ ಕಾರ್ಯಕ್ರಮವನ್ನು ನಿರೂಪಿಸಿದರು. ಧಾರವಾಡ ಡಿಎಆರ್ ಡಿಎಸ್‌ಪಿ ಡಿ.ಎಸ್. ಧನಗರ ಅವರು ವಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೇದಾರ ಹಾಗೂ ನಿವೃತ್ತ ಡಿಸಿಪಿ ದೇವರಹೊರು ಉಪಸ್ಥಿತರಿದ್ದರು. ವಿವಿಧ ಘಟಕಗಳ ಪೊಲೀಸ್ ಅಧಿಕಾರಿಗಳು, ಕ್ರೀಡಾಪಟುಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

