
ಧಾರವಾಡ: ಆಗಸ್ಟ್ 2025ರ ಮಾಹೆಯಲ್ಲಿ ಅತಿವೃಷ್ಠಿಯಿಂದಾಗಿ ತೀವ್ರ ಬೆಳೆ ಹಾನಿ ಅನುಭವಿಸಿದ್ದ ಧಾರವಾಡ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರವು ಬೃಹತ್ ಪರಿಹಾರವನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಜಿಲ್ಲೆಗೆ ಹೆಚ್ಚುವರಿಯಾಗಿ 63.77 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಹಣವನ್ನು ಅರ್ಹ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಇಂದೇ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಹೆಕ್ಟೇರ್ಗೆ 8,500 ರೂಪಾಯಿಗಳ ಹೆಚ್ಚುವರಿ ಸಬ್ಸಿಡಿಯನ್ನು ರಾಜ್ಯ ಸರ್ಕಾರದಿಂದ ವಿತರಿಸಲು ಕ್ರಮ ವಹಿಸಲಾಗಿದ್ದು, ಈ ಮೂಲಕ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಆರ್ಥಿಕ ನೆರವು ನೀಡಿದಂತಾಗಿದೆ.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ ವಿವರಗಳ ಪ್ರಕಾರ, ಈ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಜಿಲ್ಲೆಯ ಒಟ್ಟು 66,834 ಅರ್ಹ ರೈತರು ಪ್ರಯೋಜನ ಪಡೆದಿದ್ದಾರೆ. ಹಾನಿಗೊಳಗಾದ ಒಟ್ಟು 74,989.57 ಹೆಕ್ಟೇರ್ ಪ್ರದೇಶಕ್ಕೆ ಈ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ತಾಲೂಕುವಾರು ಪರಿಹಾರ ವಿತರಣೆ ವಿವರ:
- ಅಣ್ಣಿಗೇರಿ: 12,127 ರೈತ ಫಲಾನುಭವಿಗಳಿಗೆ 14,036.56 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹11,93,36,790 ಪರಿಹಾರ ವಿತರಿಸಲಾಗಿದೆ.
- ಧಾರವಾಡ: 12,643 ರೈತ ಫಲಾನುಭವಿಗಳಿಗೆ 13,414.47 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹11,40,91,341 ಪರಿಹಾರ ವಿತರಿಸಲಾಗಿದೆ.
- ಹುಬ್ಬಳ್ಳಿ: 11,122 ರೈತ ಫಲಾನುಭವಿಗಳಿಗೆ 13,945.77 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹11,85,64,826 ಪರಿಹಾರ ವಿತರಿಸಲಾಗಿದೆ.
- ಹುಬ್ಬಳ್ಳಿ ನಗರ: 851 ರೈತ ಫಲಾನುಭವಿಗಳಿಗೆ 775.04 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹66,01,919 ಪರಿಹಾರ ವಿತರಿಸಲಾಗಿದೆ.
- ಕುಂದಗೋಳ: 11,208 ರೈತ ಫಲಾನುಭವಿಗಳಿಗೆ 11,538.14 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹9,81,79,837 ಪರಿಹಾರ ವಿತರಿಸಲಾಗಿದೆ.
- ನವಲಗುಂದ: 18,883 ರೈತ ಫಲಾನುಭವಿಗಳಿಗೆ 21,279.59 ಹೆಕ್ಟೇರ್ ಕ್ಷೇತ್ರಕ್ಕೆ ಒಟ್ಟು ₹18,09,71,366 ಪರಿಹಾರ ವಿತರಿಸಲಾಗಿದೆ.
ಈಗಾಗಲೇ ಬೆಳೆ ಹಾನಿಗೊಳಗಾದ ರೈತರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಮಾರ್ಗಸೂಚಿಯಂತೆ ಇದೇ 66,834 ರೈತರಿಗೆ, 74,989.57 ಹೆಕ್ಟೇರ್ ಪ್ರದೇಶಕ್ಕೆ ಒಟ್ಟು ₹64.96 ಕೋಟಿ ಇನ್ಪುಟ್ ಸಬ್ಸಿಡಿಯನ್ನು ಈ ಹಿಂದೆಯೇ ಜಮೆ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಇಂದು ಬಿಡುಗಡೆ ಮಾಡಿರುವ ₹63.77 ಕೋಟಿ ಹೆಚ್ಚುವರಿ ಪರಿಹಾರ ಮೊತ್ತವನ್ನು ಸಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡುವುದರ ಮೂಲಕ ಒಟ್ಟು ಪರಿಹಾರದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ಅತಿವೃಷ್ಟಿಯಿಂದ ಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಸಾವಿರಾರು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ ನೀಡಿದೆ.

