
ಧಾರವಾಡ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಸರ್ಕಾರಿ ನೌಕರರ ಕರ್ತವ್ಯದ ಸಾಮರ್ಥ್ಯ ಹೆಚ್ಚಿಸಲು ಮತ್ತು ಆರ್ಥಿಕ ವಂಚನೆ, ಮೋಸಗಳಿಂದ ಸುರಕ್ಷಿತವಾಗಿರಲು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಇದರ ಭಾಗವಾಗಿ, ಡಿಸೆಂಬರ್ 2, 2025 ರಂದು ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಪ್ರತಿ ತಿಂಗಳು ವಿಶೇಷ ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ನೌಕರರನ್ನು ಕೌಶಲ್ಯಭರಿತರು ಮತ್ತು ಹೆಚ್ಚು ಜ್ಞಾನಯುಕ್ತರನ್ನಾಗಿ ಮಾಡುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ. ನೌಕರರು ತಮ್ಮ ಕಚೇರಿ ಕೆಲಸ ಮತ್ತು ಇಲಾಖಾ ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸಲು ವೃತ್ತಿ ಕೌಶಲ್ಯಭರಿತರನ್ನಾಗಿ ಸಿದ್ಧಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮಂಗಳವಾರ (ಡಿ. 2, 2025) ಸಂಜೆ 4 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎರಡು ಪ್ರಮುಖ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದೆ. ಸರ್ಕಾರಿ ನೌಕರರ ಕೆಜಿಐಡಿ (KGID) ವಂತಿಗೆ ಕಡಿತ, ಸಾಲ ಸೌಲಭ್ಯ, ಕೆಜಿಐಡಿ ಆನ್ಲೈನ್ ಸೇವೆ ಮತ್ತು ಸೌಲಭ್ಯಗಳ ಬಳಕೆ ಕುರಿತು ಜಿಲ್ಲಾ ವಿಮಾ ಅಧಿಕಾರಿ ಜೆ. ಸಿ. ಕಠಾರಿ ಅವರು ಉಪನ್ಯಾಸ ನೀಡಲಿದ್ದಾರೆ. ಇದರ ಜೊತೆಗೆ, ಆರ್ಥಿಕ ವಂಚನೆ, ಡಿಜಿಟಲ್ ಅರೆಸ್ಟ್, ಬ್ಯಾಂಕ್ ಹೆಸರಿನ ಮೋಸದ ಕರೆಗಳು ಹಾಗೂ ಸೈಬರ್ ಅಪರಾಧಗಳ ಕುರಿತು ಧಾರವಾಡದ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಶಿವಾನಂದ ಕಟಗಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಈ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಡಿಓಗಳು, ಇಎಸ್ಟಿ ವಿಷಯ ನಿರ್ವಾಹಕರು ಹಾಗೂ ಇತರೆ ನೌಕರರು ತಪ್ಪದೇ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸುತ್ತೋಲೆ ಹೊರಡಿಸಿ ಸೂಚಿಸಿದ್ದಾರೆ.

