ಅಪಘಾತಕ್ಕೀಡಾದ ಶಿಕ್ಷಕರಿಗೆ ವಿಶೇಷ ರಜೆ ಮಂಜೂರು: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಮಾನವೀಯ ಸ್ಪಂದನೆಗೆ ಮೆಚ್ಚುಗೆ

Spread the love

👩‍⚕️ ಅಪಘಾತಕ್ಕೀಡಾದ ಶಿಕ್ಷಕರಿಗೆ ವಿಶೇಷ ರಜೆ ಮಂಜೂರು: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಮಾನವೀಯ ಸ್ಪಂದನೆಗೆ ಮೆಚ್ಚುಗೆ

ಧಾರವಾಡ: ನ.12: ಹಿಂದುಳಿದ ವರ್ಗಗಳ ಆಯೋಗದ ಆದೇಶದಂತೆ ಧಾರವಾಡ ಜಿಲ್ಲೆಯಲ್ಲಿ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವಾಗ ಆಕಸ್ಮಿಕ ಅಪಘಾತಕ್ಕೆ ಒಳಗಾದ ಶಿಕ್ಷಕರಿಗೆ ವಿಶೇಷ ರಜೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ್ದ ನಿರ್ದೇಶನವನ್ನು ಪಾಲಿಸಿ, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬುದುವಾರದಂದು (ನ.13) ಆದೇಶಿಸಿದ್ದಾರೆ.

ಸಮೀಕ್ಷಾ ಕಾರ್ಯಕ್ಕೆ ತೆರಳುವಾಗ ಬೈಕ್ ಅಪಘಾತ ಮತ್ತು ಜಾರಿಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದ ಓರ್ವ ಶಿಕ್ಷಕ ಮತ್ತು ಇಬ್ಬರು ಶಿಕ್ಷಕಿಯರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ವಿಶೇಷ ಅಂಗವೈಕಲ್ಯ ರಜೆಯನ್ನು ಮಂಜೂರು ಮಾಡಲಾಗಿದೆ.

ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಧಾರವಾಡ ತಾಲೂಕಿನ ದುರ್ಗದಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಪೂಜಾರ ಅವರು ಸಮೀಕ್ಷಾ ಕಾರ್ಯಕ್ಕೆ ತೆರಳುವಾಗ ಬೈಕ್ ಸ್ಕೀಡ್ ಆಗಿ ಅಪಘಾತಕ್ಕೀಡಾಗಿ, ಗಂಭೀರ ಕಾಲಿನ ಮೂಳೆ ಮುರಿತದಿಂದ ವಿಶ್ರಾಂತಿ ಪಡೆಯುತ್ತಿದ್ದರು. ಇವರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ, ಕೆ.ಸಿ.ಎಸ್.ಆರ್. ನಿಯಮದಂತೆ ವಿಶೇಷ ಅಂಗವೈಕಲ್ಯ ರಜೆ ಮಂಜೂರು ಮಾಡಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅವರು ಆದೇಶ ಹೊರಡಿಸಿದ್ದಾರೆ.

ಅದರಂತೆ, ಕುಂದಗೋಳ ತಾಲೂಕಿನ ಕಮಡೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಪ್ರಧಾನ ಗುರು ಸುಶೀಲಾ ಶಂ. ಪಾಟೀಲ ಮತ್ತು ಹಿರೇಹರಕುಣಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಸಹಶಿಕ್ಷಕಿ ವೀಣಾ ಬಿ. ಚನ್ನಿ ಅವರಿಗೂ ಕುಂದಗೋಳ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಅವರು ವಿಶೇಷ ಅಂಗವೈಕಲ್ಯ ರಜೆ ಮಂಜೂರು ಮಾಡಿ ಆದೇಶಿಸಿದ್ದಾರೆ.

ಆಯೋಗದ ಸಮೀಕ್ಷಾ ಕಾರ್ಯದಲ್ಲಿ ಅಪಘಾತಕ್ಕೆ ಒಳಗಾದ ಶಿಕ್ಷಕರು ರಜೆ ಮಂಜೂರಿಗಾಗಿ ಮನವಿ ಸಲ್ಲಿಸಿದ್ದರು. ನೌಕರರ ಬಗ್ಗೆ ವಿಶೇಷ ಕಾಳಜಿ ವಹಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ್ದ ಭರವಸೆಯಂತೆ ಸ್ಪಂದಿಸಿ, ಅನಾರೋಗ್ಯ ಪೀಡಿತ ಶಿಕ್ಷಕ ಸಿಬ್ಬಂದಿಗಳಿಗೆ 120 ದಿನಗಳ ವಿಶೇಷ ಅಂಗವೈಕಲ್ಯ ರಜೆಗಳನ್ನು ಮಂಜೂರು ಮಾಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಈ ತ್ವರಿತ ಮತ್ತು ಮಾನವೀಯ ಸ್ಪಂದನೆಗೆ ಚಿಕಿತ್ಸೆಯಲ್ಲಿರುವ ಗಾಯಾಳು ಶಿಕ್ಷಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *