
ಧಾರವಾಡ ನ.19: ಗ್ರಾಮೀಣ ಭಾಗದ ತಳಸಮುದಾಯದ ಪರಿಶಿಷ್ಟ ಜಾತಿಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ವಿಶೇಷ ಘಟಕ ಯೋಜನೆ ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಹಾಡಿರೇ ರಾಗಗಳ–ತೂಗಿರೇ ದೀಪಗಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಯೋಜನೆಗಳಿಂದ ಗ್ರಾಮೀಣ ಹಾಗೂ ತಳ ಸಮುದಾಯದ ಜಾನಪದ ಕಲಾವಿದರಿಗೆ ಹೆಚ್ಚಿನ ವೇದಿಕೆಗಳು ಲಭಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಾನಪದ ಕಲಾವಿದರು ನಮ್ಮ ನಾಡಿನ ನಿಜವಾದ ಧ್ವನಿಯಾಗಿದ್ದಾರೆ ಎಂದು ಹೇಳಿದರು. ಹಳ್ಳಿಗಳ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಹಾಡುಗಳು, ಇತಿಹಾಸದ ಹೋರಾಟಗಾರರ ಶೌರ್ಯ ಮತ್ತು ಬಲಿದಾನದ ಮಹಿಮೆ ಸಾರುವ ಲಾವಣಿಗಳ ಪರಂಪರೆಯನ್ನು ಉಳಿಸಿ ಬೆಳೆಸುವುದು ಈ ಕಾರ್ಯಕ್ರಮದ ಮೂಲ ಆಶಯವಾಗಿದೆ ಎಂದು ತಿಳಿಸಿದರು. ಜನಪದ ಕಲೆಯ ಗೌರವ ಕಾಪಾಡುವಲ್ಲಿ ಜನರೆಲ್ಲರೂ ಆಸ್ವಾದನಾತ್ಮಕ ಶ್ರೋತರಾಗಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಸೋಲಿಗರ ಜನಪದ ಹಾಡುಗಳು ಅಪರೂಪದ ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿವೆ ಎಂದು ವಿವರಿಸಿದರು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಸಾಂಪ್ರದಾಯಿಕ ಕಲೆಗಳ ಮಿಶ್ರಣವಾಗಿರುವ ಆ ಹಾಡುಗಳ ಸಾಲುಗಳಲ್ಲಿ ಮೂಡಿಬಂದ ಸೌಂದರ್ಯವೇ ಈ ಕಾರ್ಯಕ್ರಮಕ್ಕೆ ‘ಹಾಡಿರೇ ರಾಗಗಳ–ತೂಗಿರೇ ದೀಪಗಳ’ ಎಂಬ ಶೀರ್ಷಿಕೆ ಆಯ್ಕೆಗೆ ಕಾರಣವಾಗಿದೆ ಎಂದರು. ಜನಪದ ಗಾಯನಗಳು ಜನರ ಅನುಭವದಿಂದಲೇ ಮೂಡಿ ಬಂದಿರುವುದರಿಂದ ಅವು ಜನರಿಂದ ಜನರಿಗೆ ಹರಡುತ್ತಾ ಇಂದು ಜನಪದ ಸಾಹಿತ್ಯವಾಗಿ ಉಳಿದಿವೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಟ್ರಸ್ಟ್ ಸದಸ್ಯರಾದ ಇಮಾಮಸಾಬ ವಲ್ಲೆಪ್ಪನವರ, ಪ್ರಭು ಕುಂದರಗಿ, ಹಿರಿಯ ಜಾನಪದ ಕಲಾವಿದೆ ಸಾವಿತ್ರಿ ಪೂಜಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಗಣೇಶ ಕದಂ ಮತ್ತು ಹಿರಿಯ ಕಲಾವಿದ ಬಿ.ಐ. ಈಳಗೇರ ಕೂಡ ಹಾಜರಿದ್ದರು.
ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ರಸಮಂಜರಿಯಲ್ಲಿ ಸಾವಿತ್ರಿಬಾಯಿ ಪೂಜಾರ ಮತ್ತು ತಂಡದಿಂದ ಗೀಗೀ ಪದಗಳು, ಶರೀಫ್ ದೊಡ್ಡಮನಿ ಹಾಗೂ ಯಕ್ಕೇರೆಪ್ಪ ನಡುವಿನಮನಿ ಮತ್ತು ಅವರ ತಂಡಗಳಿಂದ ತತ್ವಪದಗಳು, ಶ್ರೀಧರ ಭಜಂತ್ರಿ ಮತ್ತು ತಂಡದಿಂದ ಶಹನಾಯಿ ವಾದನ, ಮಡಿವಾಳಪ್ಪ ಭಜಂತ್ರಿ ಮತ್ತು ತಂಡದಿಂದ ವಚನಗಾಯನ, ಕೀರ್ತನಾ ನಾಯಕ ಮತ್ತು ತಂಡದಿಂದ ಸುಗಮ ಸಂಗೀತ, ಅಶ್ವಿನಿ ಉಳ್ಳಿಕಾಶಿ ಮತ್ತು ತಂಡದಿಂದ ಭಾವಗೀತೆಗಳು, ಸ್ಟಿಫನ್ ಲುಂಜಳ ಮತ್ತು ತಂಡದಿಂದ ವಾದ್ಯ ಸಂಗೀತ, ಚನ್ನಮ್ಮ ಹುಲಮನಿ ಮತ್ತು ತಂಡದಿಂದ ಸೋಬಾನ ಹಾಡುಗಳು ಹಾಗೂ ಮಹಾಂತೇಶ ದೊಡಮನಿ ಮತ್ತು ತಂಡದಿಂದ ಹೋರಾಟದ ಹಾಡುಗಳ ಮನೋಜ್ಞ ಗಾಯನ ಜರುಗಿತು.

