ಖಾಲಿ ಚೀಲದ ಕೊರತೆ: ಕುಂದಗೋಳದಲ್ಲಿ ಕಡಲೆ ಖರೀದಿ ಕೇಂದ್ರಗಳ ಅವ್ಯವಸ್ಥೆ – ರೈತರ ಅನ್ನಕ್ಕೆ ಕಲ್ಲು ಹಾಕುತ್ತಿರುವ ಅಧಿಕಾರಿಗಳ ಉದಾಸೀನ!

Spread the love

ಕುಂದಗೋಳ: ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಲೆಂದು ಸರ್ಕಾರ ಆರಂಭಿಸಿರುವ ಬೆಂಬಲ ಬೆಲೆ ಖರೀದಿ ಕೇಂದ್ರಗಳು, ಇಂದು ಅಧಿಕಾರಿಗಳ ಮತ್ತು ವ್ಯವಸ್ಥೆಯ ದಾರಿದ್ರ್ಯಕ್ಕೆ ಸಾಕ್ಷಿಯಾಗಿವೆ. ಕುಂದಗೋಳ ತಾಲೂಕಿನಾದ್ಯಂತ ಚೀಲಗಳ ಕೊರತೆಯಿಂದ ಕಡಲೆ ಖರೀದಿ ಪ್ರಕ್ರಿಯೆ ಹಳ್ಳ ಹಿಡಿದಿದ್ದು, ಅನ್ನದಾತ ಬೀದಿಯಲ್ಲಿ ನಿಂತು ಕಣ್ಣೀರು ಹಾಕುವಂತಾಗಿದೆ.

ಬಿಸಿಲಿನಲ್ಲಿ ಬೆಂದ ರೈತ – ಟ್ರ್ಯಾಕ್ಟರ್ ಬಾಡಿಗೆಗೆ ಕುತ್ತು!
ತಾಲೂಕಿನ ಕುಂದಗೋಳ, ಯಲಿವಾಳ, ಸಂಶಿ ಹಾಗೂ ಯರಗುಪ್ಪಿ ಖರೀದಿ ಕೇಂದ್ರಗಳಿಗೆ ರೈತರು ಸಾಲ-ಸೋಲ ಮಾಡಿ ಟ್ರ್ಯಾಕ್ಟರ್‌ಗಳಲ್ಲಿ ಕಡಲೆ ಹೊತ್ತು ತರುತ್ತಿದ್ದಾರೆ. ಆದರೆ, ಅಲ್ಲಿ ಚೀಲಗಳಿಲ್ಲ ಎಂಬ ಹಾರಿಕೆ ಉತ್ತರ ಕೇಳಿ ರೈತರು ಕಂಗಾಲಾಗಿದ್ದಾರೆ. ಪ್ರತಿ ದಿನದ ಟ್ರ್ಯಾಕ್ಟರ್ ಬಾಡಿಗೆ ಒಂದು ಕಡೆಯಾದರೆ, ಬಿರು ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ರೈತರ ದೇಹ ಬಳಲುತ್ತಿದೆ. ಅತ್ತ ಮಳೆಯ ಆತಂಕವೂ ಕಾಡುತ್ತಿದ್ದು, ರಾಶಿ ಮಾಡಿಟ್ಟ ಕಡಲೆ ಏನಾಗುವುದೋ ಎಂಬ ಭೀತಿ ಆವರಿಸಿದೆ.

ಖಾಲಿ ಚೀಲದ ಬರ: ಸಂಶಿ, ಯಲಿವಾಳ ಕೇಂದ್ರಗಳು ಬಂದ್!
ಯಲಿವಾಳ ಮತ್ತು ಸಂಶಿ ಕೇಂದ್ರಗಳಲ್ಲಿ ಖಾಲಿ ಚೀಲಗಳ ದಾಸ್ತಾನು ಶೂನ್ಯಕ್ಕೆ ತಲುಪಿದೆ. ಇದರಿಂದ ಬೇಸತ್ತ ಅಧಿಕಾರಿಗಳು ಖರೀದಿಯನ್ನೇ ನಿಲ್ಲಿಸಿದ್ದಾರೆ. “ನಾವು ಹುಬ್ಬಳ್ಳಿಗೆ ಪತ್ರ ಬರೆದಿದ್ದೇವೆ, ಅವರು ಚೀಲ ಕಳಿಸಿಲ್ಲ” ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಚೀಲಗಳಿಲ್ಲದ ಕಾರಣ ರೈತರಿಗೆ “ಇಂದು ಬನ್ನಿ, ನಾಳೆ ಬನ್ನಿ” ಎಂದು ಅಲೆದಾಡಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

“ರಸ್ತೆ ಮೇಲೆ ಕಡಲೆ ಸುರಿದು ಪ್ರತಿಭಟನೆ ಮಾಡಬೇಕಾದೀತು”
“ನಾವು ಸಂಶಿ ಕಡಲೆ ಖರೀದಿ ಕೇಂದ್ರಕ್ಕೆ ಕಡಲೆ ತೆಗೆದುಕೊಂಡು ಹೋದರೆ ಅಲ್ಲಿ ಖಾಲಿ ಚೀಲಗಳಿಲ್ಲ ಎಂದು ಅಧಿಕಾರಿಗಳು ವಾಪಸ್ ಕಳಿಸುತ್ತಿದ್ದಾರೆ. ಇಂದು ಬನ್ನಿ ನಾಳೆ ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ನಮ್ಮ ಕಡಲೆ ರಾಶಿಯನ್ನು ಖರೀದಿ ಕೇಂದ್ರದ ಮುಂದೆಯೇ ಸುರಿದು ಉಗ್ರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ.”
— ಯಲ್ಲಪ್ಪ ಬಾರಕೇರ, ರೈತರು

ತಹಶೀಲ್ದಾರರ ಭರವಸೆ: ಕಾರ್ಯರೂಪಕ್ಕೆ ಬರುವುದೇ?
ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ರಾಜು ಮಾವರಕರ ಅವರು, “ಕಡಲೆ ಖರೀದಿ ಕೇಂದ್ರಗಳಲ್ಲಿ ಖಾಲಿ ಚೀಲದ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಚೀಲಗಳ ಕೊರತೆಯಾಗದಂತೆ ಕೂಡಲೇ ಪೂರೈಕೆ ಮಾಡಲು ಸೂಚಿಸಿದ್ದು, ಶೀಘ್ರವೇ ಸಮಸ್ಯೆ ಸರಿಪಡಿಸಲಾಗುವುದು,” ಎಂದು ತಿಳಿಸಿದ್ದಾರೆ.

ತಕ್ಷಣದ ಕ್ರಮಕ್ಕೆ ಆಗ್ರಹ:
ಕೇವಲ ಭರವಸೆಗಳಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಟ್ರ್ಯಾಕ್ಟರ್ ಬಾಡಿಗೆ ಏರುತ್ತಿದೆ, ಬಿಸಿಲು ಸುಡುತ್ತಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಹುಬ್ಬಳ್ಳಿ ಯಾರ್ಡ್‌ನಿಂದ ಸಮರ್ಪಕವಾಗಿ ಚೀಲಗಳನ್ನು ಪೂರೈಸಿ, ಸ್ಥಗಿತಗೊಂಡಿರುವ ಖರೀದಿ ಪ್ರಕ್ರಿಯೆಯನ್ನು ಯುದ್ಧೋಪಾದಿಯಲ್ಲಿ ಆರಂಭಿಸಬೇಕಿದೆ. ಇಲ್ಲದಿದ್ದರೆ ಕುಂದಗೋಳದ ರೈತರು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ.ಎಂದು ರೈತ ಮುಂಖಡರಾದ ಬಸವರಾಜ ಯೋಗಪ್ಪನವರ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *