
ಕುಂದಗೋಳ: ಪಟ್ಟಣದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಿರಾಮಯ ಫೌಂಡೇಶನ್ ಹಮ್ಮಿಕೊಂಡಿದ್ದ ಸಂಗೀತ, ನೃತ್ಯ ಹಾಗೂ ಜಾನಪದ ಒಳಗೊಂಡ ‘ಶಿವಾಮೃತ’ ಕಾರ್ಯಕ್ರಮವು ಜನಮನ ಸೂರೆಗೊಂಡಿತು. ಭಾನುವಾರ ಸಂಜೆ 7 ಗಂಟೆಗೆ ಆರಂಭವಾದ ಈ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಉತ್ಸವವು ಸೋಮವಾರ ಬೆಳಗಿನ ಜಾವ 7 ಗಂಟೆಯವರೆಗೆ ನಿರಂತರವಾಗಿ ಜರುಗುವ ಮೂಲಕ ಭಕ್ತರನ್ನು ಭಕ್ತಿಭಾವದಲ್ಲಿ ತೇಲಿಸಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು ಮಾತನಾಡಿ, ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ನಿರಾಮಯ ಫೌಂಡೇಶನ್ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ. ಸಂಘಟಿತ ಪ್ರಯತ್ನಕ್ಕೆ ಸೋಲದ ಮನಸ್ಸುಗಳೇ ಇಲ್ಲ, ಇಂತಹ ಸಮಾಜಮುಖಿ ಕಾರ್ಯಗಳು ಯುವಶಕ್ತಿಗೆ ದೊಡ್ಡ ಪ್ರೇರಣೆಯಾಗಲಿವೆ ಎಂದು ಹರಸಿದರು.

ಶಿವಮೊಗ್ಗದ ಕಗ್ಗ ನಟೇಶ್ ಅವರು ಮಾತನಾಡಿ, ಶಿವಾಮೃತವು ನಿರಾಕಾರ ಹಾಗೂ ನಿರ್ಗುಣದ ಸಾಕಾರತೆಯ ಭಾಗವಾಗಿದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದ್ದು, ನಮ್ಮಲ್ಲಿ ಕೃತಜ್ಞತಾ ಭಾವವಿರಬೇಕು ಎಂದು ತಿಳಿಸಿದರು. ಯೋಗ ಶಿಕ್ಷಕ ವಿನಾಯಕ ತಳಗೇರಿ ಅವರು ಯೋಗದ ಮಹತ್ವ ಹಾಗೂ ಶಿವರಾತ್ರಿಯ ಉಪವಾಸ-ಜಾಗರಣೆಯ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸಿದರು.
ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಮುಖಂಡ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಸ್ವಾರ್ಥವಿಲ್ಲದೆ ಯುವ ಸಮೂಹಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕುಂದಗೋಳಕ್ಕೆ ಬಂದು ತಮ್ಮ ಸೇವೆ ಸಮರ್ಪಿಸುತ್ತಿರುವುದು ಈ ನೆಲದ ಪುಣ್ಯ ಎಂದರು. ಸಹಕಾರಿ ಮುಖಂಡ ಅರವಿಂದ ಕಟಗಿ ಅವರು ಮಾತನಾಡಿ, ಡಾ. ಮಲ್ಲಿಕಾರ್ಜುನ ಅವರ ನಿಷ್ವಾರ್ಥ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಹರ್ಲಾಪೂರದ ಸಾಂಭಯ್ಯ ಹಿರೇಮಠ ತಂಡದಿಂದ ಜಾನಪದ ಗೀತೆ, ಪ್ರಕಾಶ್ ಮತ್ತು ಪಂಚಾಕ್ಷರಯ್ಯ ಹಿರೇಮಠ ಸಹೋದರರಿಂದ ಭಕ್ತಿ ಸಂಗೀತ, ಅಜಿತ ಬಸಾಪೂರ ಕಬನೂರ ತಂಡದಿಂದ ಜೋಗತಿ ನೃತ್ಯ ಹಾಗೂ ಕು. ಪಲ್ಲವಿ ಚಾಕಲಬ್ಬಿ ಅವರಿಂದ ಭರತನಾಟ್ಯ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆದವು. ಶಿರೂರಿನ ಯಲ್ಲಪ್ಪ ತಳವಾರ್ ಅವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ಸಂದೇಶ ಹುಟಗಿ ತಂಡದಿಂದ ಗಿಟಾರ್ ಮೂಲಕ ನಡೆದ ಶಿವಸ್ತುತಿಯು ವಿಶೇಷವಾಗಿ ಮೂಡಿಬಂದಿತು. ವೀರೇಶ ಪ್ರಳಯಕಲ್ಮಠ ಅವರು ಅಷ್ಟೋತ್ತರ ಶತನಾಮಾವಳಿ ಹಾಗೂ ಮಹಾಮಂಗಳಾರತಿ ನೆರವೇರಿಸಿಕೊಟ್ಟರು.
ಸಮಾರಂಭದಲ್ಲಿ ಬಂಡಿವಾಡ-ಅಣ್ಣೀಗೇರಿಯ ಡಾ. ಎ.ಸಿ. ವಾಲಿ ಗುರೂಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಗುರು ಬನ್ನಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

