​ಶಿಗ್ಗಾಂವ: ತಾ: ಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಮೂರ್ತಿಗೆ ಸಗಣಿ ಬಳಿದು ವಿಕೃತಿ: ದಲಿತರ ಮೇಲೆ ಹಲ್ಲೆ ಆರೋಪ, ಗ್ರಾಮದಲ್ಲಿ ಉದ್ವಿಗ್ನತೆ

Spread the love

ಶಿಗ್ಗಾವಿ: ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಸಗಣಿ ಬಳಿದು ಅಪಮಾನ ಮಾಡಿರುವ ಘಟನೆ ನಡೆದಿದೆ. ಈ ಕೃತ್ಯದ ಬೆನ್ನಲ್ಲೇ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪವೂ ಕೇಳಿಬಂದಿದೆ.

​ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ದಲಿತರನ್ನು ಮೇಲ್ವರ್ಗದವರು ಬಹಿಷ್ಕರಿಸಿದ್ದು, ಯಾವುದೇ ದೇವಸ್ಥಾನಗಳ ಒಳಗೆ ಪ್ರವೇಶ ನೀಡದೆ ತಾರತಮ್ಯ ಎಸಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರ ನಡುವೆ, ಭಾನುವಾರ ರಾತ್ರಿ ಏಕಾಏಕಿ ಬಂದ ಕಿಡಿಗೇಡಿಗಳ ಗುಂಪು ದಲಿತರ ಮೇಲೆ ಹಲ್ಲೆ ನಡೆಸಿ, ಗ್ರಾಮದಲ್ಲಿದ್ದ ಅಂಬೇಡ್ಕರ್ ಅವರ ಮೂರ್ತಿಗೆ ಸಗಣಿ ಬಳಿದು ವಿಕೃತಿ ಮೆರೆದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳು ಹಾಗೂ ಗ್ರಾಮದ ಪ್ರಜ್ಞಾವಂತರು ಸ್ಥಳಕ್ಕೆ ಆಗಮಿಸಿ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಹಲ್ಲೆಯ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *