ಕೌಟುಂಬಿಕ ಕಲಹಕ್ಕೆ ಬೇಸತ್ತು ಕುರಿಗಾಹಿ ಆತ್ಮಹತ್ಯೆ: ನಾಲ್ವರ ಬಂಧನ

Spread the love

ಮರಣಪೂರ್ವ ವಿಡಿಯೋದಲ್ಲಿ ಕಿರುಕುಳದ ಬಗ್ಗೆ ಮಾಹಿತಿ ನೀಡಿದ ಯುವಕ

ಹಾವೇರಿ: ಪತ್ನಿ ಹಾಗೂ ಆಕೆಯ ಕುಟುಂಬದವರಿಂದ ತೀವ್ರ ಕಿರುಕುಳಕ್ಕೆ ಬೇಸತ್ತ ಕುರಿಗಾಹಿಯೊಬ್ಬ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ನಿವಾಸಿ ಮಂಜುನಾಥ ಚಿಲ್ಲೋಜಿ (26) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿದಂತೆ ನಾಲ್ವರನ್ನು ಹಿರೇಕೆರೂರು ಪೊಲೀಸರು ಬಂಧಿಸಿದ್ದಾರೆ.

ಹಿರೇಕೆರೂರಿನಲ್ಲಿ ದುರಂತ ಅಂತ್ಯ

​ಕುರಿಗಾಹಿಯಾಗಿದ್ದ ಮಂಜುನಾಥ್ ತಮ್ಮ ಕುರಿಗಳೊಂದಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ವರಹ ಗ್ರಾಮಕ್ಕೆ ಬಂದಿದ್ದರು. ಅಲ್ಲಿಯೇ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಂಜುನಾಥ್ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತಾನು ಅನುಭವಿಸಿದ ಕಿರುಕುಳದ ವಿವರಗಳನ್ನು ದಾಖಲಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಸಂಬಂಧಿಯೊಬ್ಬರಿಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಕೌಟುಂಬಿಕ ಹಿನ್ನೆಲೆ ಮತ್ತು ದೂರು

​ಮೃತ ಮಂಜುನಾಥ್ ಅವರು ಎರಡು ವರ್ಷಗಳ ಹಿಂದೆ ತಮ್ಮ ಸೋದರತ್ತೆಯ ಮಗಳಾದ ರೇಖಾ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದಾಗಿನಿಂದಲೂ ರೇಖಾ ಮಂಜುನಾಥ್ ಅವರೊಂದಿಗೆ ಸಂಸಾರ ಮಾಡದೆ ಜಗಳ ಮಾಡಿ ತವರು ಮನೆ ಸೇರುತ್ತಿದ್ದರು ಎನ್ನಲಾಗಿದೆ. ಪತ್ನಿಯನ್ನು ಕರೆತರಲು ಹೋದಾಗ ಮಾವ ಬೀರಪ್ಪ ಕೌಲಾಪುರೆ, ಅತ್ತೆ ಸತ್ಯವ್ವ ಕೌಲಾಪುರೆ, ಮಾವಂದಿರಾದ ಹೊನಸಿದ್ದಪ್ಪ ಬನ್ನೆ ಮತ್ತು ರಾಜಪ್ಪ ಬನ್ನೆ ಎಲ್ಲರೂ ಸೇರಿ ಚಪ್ಪಲಿಯಿಂದ ಹೊಡೆದು ಕಳುಹಿಸಿದ್ದರು. ಇದರಿಂದ ಮಾನಸಿಕವಾಗಿ ಬೇಸರಗೊಂಡಿದ್ದ ಮಂಜುನಾಥ್ ಅವರಿಗೆ ನವೆಂಬರ್ 18 ರಂದು ಪತ್ನಿಯು ತನ್ನ ಮೇಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಮತ್ತಷ್ಟು ನೋವಾಗಿತ್ತು.

ವಿಡಿಯೋದಲ್ಲಿ ಆತ್ಮಹತ್ಯೆಗೆ ಕಾರಣರಾದವರ ಹೆಸರು ಉಲ್ಲೇಖ

​ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿದ ವಿಡಿಯೋದಲ್ಲಿ, ತಮ್ಮ ಆತ್ಮಹತ್ಯೆಗೆ ಪತ್ನಿ ರೇಖಾ, ಆಕೆಯ ತಂದೆ-ತಾಯಿ ಹಾಗೂ ಸಂಬಂಧಿಕರೇ ಕಾರಣ ಎಂದು ಮಂಜುನಾಥ್ ಸ್ಪಷ್ಟವಾಗಿ ಹೇಳಿದ್ದಾರೆ. “ಅವರು ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಕೊಟ್ಟಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು,” ಎಂದು ಕಣ್ಣೀರು ಹಾಕುತ್ತಾ ಮನವಿ ಮಾಡಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ಮಾಡಿ, ತದನಂತರ ಹಿರೇಕೆರೂರು ತಾಲ್ಲೂಕಿನ ವರಾಹ ಗ್ರಾಮದ ಜಮೀನೊಂದರಲ್ಲಿ ಅವರು ನೇಣು ಬಿಗಿದುಕೊಂಡಿದ್ದಾರೆ.

ನಾಲ್ವರ ಬಂಧನ ಮತ್ತು ನ್ಯಾಯಾಂಗ ಬಂಧನ

​ಈ ಕುರಿತು ಮೃತನ ಸಹೋದರಿ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಹಿರೇಕೆರೂರು ಪೊಲೀಸರು ತನಿಖೆ ನಡೆಸಿ, ಮೃತನ ಪತ್ನಿ ರೇಖಾ, ಆಕೆಯ ತಂದೆ ಭೀರಪ್ಪ ಕವಲಾಪುರಿ, ಹಾಗೂ ಮಾವಂದಿರಾದ ಹೊನ್ನಸಿದ್ದಪ್ಪ ಮತ್ತು ರಾಜಪ್ಪ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *