ರಾಜ್ಯಾದ್ಯಂತ ಶೀತಗಾಳಿ ತೀವ್ರ: ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

Spread the love

ಧಾರವಾಡ: ರಾಜ್ಯಾದ್ಯಂತ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳನ್ನು ಜಿಲ್ಲೆಯ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚನೆ ನೀಡಿದ್ದಾರೆ.

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಸೂಚನೆ:

ಶೀತಗಾಳಿಯಿಂದ ಉಂಟಾಗಬಹುದಾದ ಲಘಷ್ಣತೆ (ಹೈಪೋಥರ್ಮಿಯಾ), ಹೃದಯಾಘಾತ ಹಾಗೂ ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ನೀಡಿದೆ:

  • ಉಡುಪು: ಒಂದು ಪದರದ ಭಾರವಾದ ಬಟ್ಟೆಗಿಂತ, ಹಲವಾರು ಪದರಗಳ ಹಗುರವಾದ ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ತಲೆಯ ಮೂಲಕ ದೇಹದ ಉಷ್ಣತೆ ಹೆಚ್ಚಾಗಿ ವ್ಯಯವಾಗುವುದರಿಂದ ತಲೆ ಮತ್ತು ಕಿವಿಯನ್ನು ಕಡ್ಡಾಯವಾಗಿ ಮುಚ್ಚಿಕೊಳ್ಳಬೇಕು.
  • ಆಹಾರ: ದೇಹಕ್ಕೆ ಶಾಖ ನೀಡುವ ಪೌಷ್ಟಿಕ ಆಹಾರ ಸೇವಿಸಬೇಕು. ನಿರ್ಜಲೀಕರಣ ತಪ್ಪಿಸಲು ಮದ್ಯಪಾನ ರಹಿತ ಪಾನೀಯಗಳನ್ನು ಹೆಚ್ಚಾಗಿ ಕುಡಿಯಬೇಕು.
  • ಮನೆಯೊಳಗೆ ಸುರಕ್ಷತೆ: ಹೀಟರ್ ಅಥವಾ ಕಲ್ಲಿದ್ದಲು ಒಲೆ ಬಳಸುವಾಗ ಗಾಳಿಯ ಸಂಚಾರಕ್ಕೆ (Ventilation) ಸರಿಯಾದ ವ್ಯವಸ್ಥೆ ಇರಲಿ. ಇಲ್ಲದಿದ್ದರೆ ವಿಷಕಾರಿ ಅನಿಲ ಸೇವನೆಯಿಂದ ಪ್ರಾಣಾಪಾಯ ಸಂಭವಿಸಬಹುದು.
  • ಪರಿಶ್ರಮ ಬೇಡ: ಅತಿಯಾದ ಚಳಿಯ ಸಮಯದಲ್ಲಿ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡಬಾರದು, ಇದು ಹೃದಯದ ಮೇಲೆ ಒತ್ತಡ ಹೇರಿ ಹೃದಯಾಘಾತಕ್ಕೆ ಕಾರಣವಾಗಬಹುದು.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ:

ಜಿಲ್ಲಾಧಿಕಾರಿಗಳು ಜಿಲ್ಲೆಯ ಅಧಿಕಾರಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ:

  1. ನಿಗಾ ವಹಿಸುವುದು: ಬಸ್ ನಿಲ್ದಾಣ, ಉದ್ಯಾನವನ ಹಾಗೂ ರಸ್ತೆ ಬದಿಗಳಲ್ಲಿ ರಾತ್ರಿ ವೇಳೆ ಯಾರೂ ಮಲಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು.
  2. ತಾಪನ ಕೇಂದ್ರಗಳು: ಚಳಿಯಿಂದ ರಕ್ಷಣೆ ಪಡೆಯಲು ವ್ಯವಸ್ಥೆ ಇಲ್ಲದವರಿಗೆ ಸರ್ಕಾರ ಒದಗಿಸಿರುವ ಸಾರ್ವಜನಿಕ ತಾಪನ ಕೇಂದ್ರಗಳಿಗೆ ತೆರಳಲು ವ್ಯವಸ್ಥೆ ಮಾಡಬೇಕು.
  3. ಜಾಗೃತಿ ಮೂಡಿಸುವುದು: ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಹಳ್ಳಿ-ಹಳ್ಳಿಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.

ಲೋಪವಾದರೆ ಕಠಿಣ ಕ್ರಮ:

ಶೀತಗಾಳಿಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಸಾವು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಲು ಆದೇಶಿಸಲಾಗಿದೆ. ಈ ಕಾರ್ಯದಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *