ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಸ್ವಯಂ ಜನಗಣತಿ ಕಾರ್ಯ ಆರಂಭ: ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ

Spread the love

ಧಾರವಾಡ: ಭಾರತದ 16ನೇ ಜನಗಣತಿಯ ಅಂಗವಾಗಿ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಸ್ವಯಂ ಗಣತಿ (Self Enumeration) ಕಾರ್ಯ ಜರುಗಲಿದ್ದು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನಗಣತಿಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮನವಿ ಮಾಡಿದ್ದಾರೆ.

​ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2027ರ ಭಾರತ ಜನಗಣತಿಯ ಮೊದಲ ಹಂತವಾಗಿ ಈ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಸ್ವಯಂ ಗಣತಿಯನ್ನು ನಿರ್ವಹಿಸಲು ಅವಕಾಶವಿದ್ದು, ಇದರಿಂದ ಸಮಯ ಉಳಿತಾಯವಾಗುವುದಲ್ಲದೆ ನಿಖರವಾದ ಮಾಹಿತಿ ದಾಖಲಿಸಲು ಸಾಧ್ಯವಾಗುತ್ತದೆ. ಸಂಪೂರ್ಣ ಡಿಜಿಟಲ್ ಮೋಡ್‌ನಲ್ಲಿ ನಡೆಯುತ್ತಿರುವ ದೇಶದ ಪ್ರಥಮ ಜನಗಣತಿ ಇದಾಗಿದ್ದು, ಸಾರ್ವಜನಿಕರು se.census.gov.in ಪೋರ್ಟಲ್ ಮೂಲಕ ಲಾಗಿನ್ ಆಗಿ ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ದಾಖಲಿಸಬಹುದಾಗಿದೆ. ಮಾಹಿತಿ ಸಲ್ಲಿಕೆಯ ನಂತರ ದೊರೆಯುವ ‘ಸೆಲ್ಫ್ ಎನ್ಯೂಮರೇಶನ್ ಐಡಿ’ (SE ID) ಅನ್ನು ಸುರಕ್ಷಿತವಾಗಿಟ್ಟುಕೊಂಡು, ನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಅದನ್ನು ನೀಡಿ ಮಾಹಿತಿ ದೃಢೀಕರಿಸಬೇಕು ಎಂದು ವಿವರಿಸಿದರು.

​ಜಿಲ್ಲೆಯಲ್ಲಿ ಜನಗಣತಿ ಕಾರ್ಯಕ್ಕಾಗಿ ಒಟ್ಟು 13 ಚಾರ್ಜ್‌ಗಳನ್ನು ರಚಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ತಹಶೀಲ್ದಾರರು ಹಾಗೂ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಾದ್ಯಂತ (ಮಹಾನಗರ ಪಾಲಿಕೆ ಹೊರತುಪಡಿಸಿ) ಒಟ್ಟು 1,569 ಬ್ಲಾಕ್‌ಗಳನ್ನು ರಚಿಸಲಾಗಿದ್ದು, 1,658 ಗಣತಿದಾರರು ಮತ್ತು 287 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2,047 ಬ್ಲಾಕ್‌ಗಳಿದ್ದು, ಅಲ್ಲಿ 2,252 ಗಣತಿದಾರರು ಹಾಗೂ 376 ಮೇಲ್ವಿಚಾರಕರು ಕಾರ್ಯಪ್ರವೃತ್ತರಾಗಲಿದ್ದಾರೆ.

​ಗಣತಿದಾರರು ಮನೆಗೆ ಭೇಟಿ ನೀಡಿದಾಗ ಕೇಳಲಾಗುವ ಸರಳ 33 ಪ್ರಶ್ನೆಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಈ ಪ್ರಕ್ರಿಯೆಗೆ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಚಾರ್ಜ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಏಪ್ರಿಲ್ ಮೊದಲ ವಾರದಲ್ಲಿ ಅಗತ್ಯ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

​ಈ ಸಂದರ್ಭದಲ್ಲಿ ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *