ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ: ಫೆ. 23 ರಿಂದ 25 ರವರೆಗೆ ಆಯೋಜನೆ

Spread the love

ಧಾರವಾಡ: ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ತರಬೇತಿ ಕೇಂದ್ರವು ಬಾಸ್ಕೆಟ್ ಬಾಲ್, ಕುಸ್ತಿ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಹೊಸ ಕ್ರೀಡಾಪಟುಗಳನ್ನು ಗುರುತಿಸಲು ಇದೇ ಫೆಬ್ರವರಿ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ.

​ಆಯ್ಕೆ ಪ್ರಕ್ರಿಯೆಯ ವೇಳಾಪಟ್ಟಿಯಂತೆ, ಫೆಬ್ರವರಿ 23 ರಂದು ಬಾಸ್ಕೆಟ್ ಬಾಲ್ ಮತ್ತು ಕುಸ್ತಿ ಕ್ರೀಡೆಗಳಿಗೆ ಹಾಗೂ ಫೆಬ್ರವರಿ 24 ಮತ್ತು 25 ರಂದು ಕಬಡ್ಡಿ ಕ್ರೀಡೆಗೆ ಆಯ್ಕೆಗಳು ನಡೆಯಲಿವೆ. ಈ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಬಯಸುವ 13 ರಿಂದ 16 ವರ್ಷ ವಯಸ್ಸಿನ ಪ್ರತಿಭಾವಂತ ಕ್ರೀಡಾಪಟುಗಳು ನಿಗದಿತ ದಿನಗಳಂದು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕು. ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಬಯಸುವ ಆಸಕ್ತ ಕ್ರೀಡಾಪಟುಗಳು ಆಯಾ ಕ್ರೀಡೆಗೆ ಸಂಬಂಧಿಸಿದ ಸಮವಸ್ತ್ರದೊಂದಿಗೆ ಅಗತ್ಯವಿರುವ ಮೂಲ ದಾಖಲೆಗಳನ್ನು ತರುವುದು ಕಡ್ಡಾಯವಾಗಿದೆ.

​ಈ ಆಯ್ಕೆ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಚಿಸುವವರು ತರಬೇತಿದಾರರಾದ ರಂಗನಾಥ (ಮೊ: 9740888020) ಅಥವಾ ಶಂಕರಯ್ಯ ಪೂಜಾರಿ (ಮೊ: 7019911347) ಅವರನ್ನು ಸಂಪರ್ಕಿಸಬಹುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತರಬೇತಿ ಕೇಂದ್ರದ ಆಡಳಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿಭಾವಂತ ಗ್ರಾಮೀಣ ಮತ್ತು ನಗರ ಭಾಗದ ಕ್ರೀಡಾಪಟುಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

Leave a Reply

Your email address will not be published. Required fields are marked *