
ಹನೂರು: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ವಿದ್ಯಾವಾರಾಧಿ (ಪಿಹೆಚ್.ಡಿ) ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮಂಗಳವಾರ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವ ಸಮಾರಂಭದಲ್ಲಿ ಸ್ವಾಮೀಜಿಯವರಿಗೆ ಈ ಉನ್ನತ ಪದವಿಯನ್ನು ಪ್ರದಾನ ಮಾಡಲಾಯಿತು.
ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪೂಜ್ಯ ಶ್ರೀಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣಪತ್ರವನ್ನು ಹಸ್ತಾಂತರಿಸಿ ಗೌರವಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕುಂದೂರು ಮಠದ ಮಠಾಧೀಪತಿಗಳಾದ ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ಕೈಗೊಂಡಿದ್ದರು.
ವೇದಾಂತ ವಿಭಾಗದಲ್ಲಿ ‘ಅಂಶುಮದಾಗಮಮ್ ಸಂಪಾದನಾತ್ಮಕ ಅಧ್ಯಯನಮ್’ ಎಂಬ ವಿಷಯದ ಕುರಿತು ಹಸ್ತಪ್ರತಿಗಳನ್ನು ಸುದೀರ್ಘವಾಗಿ ಅಧ್ಯಯನ ನಡೆಸಿ, ಸಿದ್ಧಪಡಿಸಿದ್ದ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಅಧ್ಯಾತ್ಮದ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ ಶ್ರೀಗಳ ಕಾರ್ಯಕ್ಕೆ ಭಕ್ತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.
ವರದಿ: ಕಾರ್ತಿಕ್ ಗೌಡ, ಹನೂರು.

