ಶಬರಿಮಲೆ ಯಾತ್ರಿಕರೇ ಎಚ್ಚರವಹಿಸಿ: ಮಿದುಳು ತಿನ್ನುವ ಅಮೀಬಾ ಕುರಿತ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಮಾರ್ಗಸೂಚಿ

Spread the love

ಧಾರವಾಡ, ನ.19: ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿ (Naegleria fowleri) ಎಂಬ ಮಿದುಳನ್ನು ದಾಳಿ ಮಾಡುವ ಅಮೀಬಾದಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರೆಗೆ ತೆರಳುವ ರಾಜ್ಯದ ಭಕ್ತರು ಹೆಚ್ಚಿದ ಜಾಗ್ರತೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಎಚ್ಚರಿಕೆ ಜಾರಿ ಮಾಡಿದೆ.

ನೇಗ್ಲೇರಿಯಾ ಫೌಲೇರಿ ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಂತ ನೀರು, ಕೊಳಗಳು, ಈಜುಕೊಳಗಳು ಮತ್ತು ಕೆರೆಗಳು ಇದರ ಸಾಮಾನ್ಯ ವಾಸಸ್ಥಾನಗಳು. ಈ ಜೀವಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಹಾಗೂ ಕಲುಷಿತ ನೀರನ್ನು ಕುಡಿಯುವುದರಿಂದವೂ ಸೋಂಕು ತಗುಲುವುದಿಲ್ಲ. ಆದರೆ ನೇರವಾಗಿ ನೀರು ಮೂಗಿನಲ್ಲಿ ಪ್ರವೇಶಿಸಿದರೆ, ಈ ಅಮೀಬಾ ಮೆದುಳಿಗೆ ತಲುಪಿ ಗಂಭೀರ ಮತ್ತು ಮಾರಕವಾದ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಉಂಟುಮಾಡಬಹುದು.

ಸೋಂಕು ತಡೆಯಲು ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಮೂಗಿನಲ್ಲಿ ನೀರು ನುಗ್ಗದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸುವುದು ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿಕೊಳ್ಳುವುದು ಅತ್ಯಂತ ಮುಖ್ಯ. ನೀರಿನ ಸಂಪರ್ಕದ 7 ದಿನಗಳೊಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ವರ್ತನೆಯಲ್ಲಿ ಬದಲಾವಣೆ ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸುವಂತೆ ಇಲಾಖೆ ಸಲಹೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *