
ಕುಂದಗೋಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕುಂದಗೋಳ ತಾಲೂಕು ಘಟಕದ ವತಿಯಿಂದ ವಿಜಯದಶಮಿ ಮತ್ತು ಸಂಚಲನ ಕಾರ್ಯಕ್ರಮವನ್ನು ಭಾನುವಾರದಂದು ವಿಜೃಂಭಣೆಯಿಂದ ನಡೆಸಲಾಯಿತು.
ಪಥಸಂಚಲನಕ್ಕೆ ಶಾಸಕರಿಂದ ಚಾಲನೆ
ಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಹರಭಟ್ಟ ಕಾಲೇಜು ಮೈದಾನದಿಂದ ಪ್ರಾರಂಭವಾಯಿತು. ಶಾಸಕರಾದ ಎಂ.ಆರ್. ಪಾಟೀಲ ಅವರು ಭಾರತ ಮಾತೆ, ಡಾ. ಕೇಶವ ಬಲಿರಾಮ ಹೆಡಗೇವಾರ್ ಮತ್ತು ಮಾಧವ ಸದಾಶಿವರಾವ್ ಗೋಳವಾಲ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಥಸಂಚಲನವು ಪಟ್ಟಣದ ಕಿಲ್ಲಾ ಓಣಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರಿಗೆ ಪುಷ್ಪ ನಮನ ಸಲ್ಲಿಸಿತು. ಮೂರು ಅಂಗಡಿ ಕೂಟದಲ್ಲಿ ತೋಪಿನ ಹಾರಾಟ ಮತ್ತು ಹೂವಿನ ಸುರಿಮಳೆಯೊಂದಿಗೆ ಸಂಚಲನಕ್ಕೆ ಅದ್ದೂರಿ ಸ್ವಾಗತ ದೊರೆಯಿತು. ಈ ಸಂಚಲನದಲ್ಲಿ 700ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.
ಆತ್ಮ ಸಂತೋಷವೇ ಸಂಘದ ಶಕ್ತಿ: ಶ್ರೀ ರಘುನಂದ ಜೀ
ನಂತರ ಹರಭಟ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಅಖಿಲ ಭಾರತೀಯ ಪ್ರಜ್ಞಾಪ್ರಹಾವದ ಸಹ ಸಂಯೋಜಕರಾದ ಶ್ರೀ ರಘುನಂದ ಜೀ ಅವರು ಮಾತನಾಡಿ, “ಮತ್ತೊಬ್ಬರಿಗೆ ಅನ್ಯಾಯ ಮಾಡದೆ ಬದುಕುವುದು ಧರ್ಮ. ಈ ಧರ್ಮವು 1200 ವರ್ಷಗಳಿಂದ ಉಳಿದು ಬಂದಿದೆ, ನಮ್ಮ ಗುರು-ಹಿರಿಯರು ಇದನ್ನು ಉಳಿಸಿಕೊಂಡು ಬಂದಿದ್ದಾರೆ” ಎಂದು ಪ್ರತಿಪಾದಿಸಿದರು.
ಆರ್‌ಎಸ್‌ಎಸ್ ಕುರಿತು ಮಾತನಾಡಿದ ಅವರು, ಸಂಘವು 100 ವರ್ಷಗಳನ್ನು ಪೂರೈಸಿದೆ. ಕೆಲವರು ಸಂಘಕ್ಕೆ ವಿದೇಶದಿಂದ ಹಣ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಕೆಲಸ ಮಾಡುವವರಿಗೆ ಸಿಗುವುದು ಕೇವಲ ಆತ್ಮ ಸಂತೋಷ. “ಪ್ರಕೃತಿ ವಿಕೋಪ, ಸುನಾಮಿ, ಬೆಂಕಿ ಹಾಗೂ ಅಪಘಾತಗಳಂತಹ ಅವಘಡಗಳ ಸನ್ನಿವೇಶಗಳಲ್ಲಿ ಮೊದಲು ನಿಲ್ಲುವವರು ಸಂಘದ ಸೇವಕರು” ಎಂದು ಹೇಳಿದರು. ಭಾರತವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆಯುತ್ತಿರುವುದರಲ್ಲಿ ಭಾರತೀಯರ ಪಾತ್ರವೇ ಹೆಚ್ಚು ಎಂದು ತಿಳಿಸಿದರು.
ಕನ್ನಡಕ್ಕೆ ಒತ್ತು, ಪರಿಸರ ಸಂರಕ್ಷಣೆ ಕಡೆ ಗಮನ
ಇಡೀ ಸಮಾಜ ಅಣ್ಣ-ತಮ್ಮಂದಿರಂತೆ ಆಗುವ ಸಾಮಾಜಿಕ ಸಾಮರಸ್ಯದ ಕೆಲಸ ಆಗಬೇಕು ಎಂದು ಕರೆ ನೀಡಿದ ರಘುನಂದ ಜೀ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು. “ಕನ್ನಡಕ್ಕೆ ಒತ್ತು ಕೊಡಬೇಕು. ಇಂಗ್ಲೀಷ್‌ನಲ್ಲಿ ಸಹಿ ಮಾಡುವುದರಿಂದ ಇಂಗ್ಲೀಷರ ಗುಲಾಮರಾಗಬಾರದು” ಎಂದು ಸಲಹೆ ನೀಡಿದರು. ಅಲ್ಲದೆ, ತಾಯಿಯ ಹಾಲಿನ ಋಣದಷ್ಟೇ ಮುಖ್ಯವಾಗಿ, ಸ್ವಾಗತ ಕೋರಿದ ಮಕ್ಕಳ ಋಣವನ್ನು ತೀರಿಸುವ ಸಂಕಲ್ಪ ಮಾಡುವುದಾಗಿ ತಿಳಿಸಿದರು.
ಗಣ್ಯರ ಉಪಸ್ಥಿತಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿಪರ ರೈತ ಗೋವಿಂದಪ್ಪ ಹನುಮಂತಪ್ಪ ತಳವಾರ ಅವರು ಮಾತನಾಡಿ, ಆರ್‌ಎಸ್‌ಎಸ್ ಶತಮಾನ ಪೂರೈಸಿದ್ದು, ಅದನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಆಶಿಸಿದರು.
ಪಂಚಗೃಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕಲ್ಯಾಣಪೂರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಸಾನಿಧ್ಯ ವಹಿಸಿದ್ದರು. ಸಿ.ಎಂ. ಕಾಳೆ, ಶ್ಯಾಮಸುಂದರ ದೇಸಾಯಿ, ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ನಾಗರಾಜ ದೇಶಪಾಂಡೆ, ಎನ್ ಎನ್ ಪಾಟೀಲ, ನಾಗನಗೌಡ ಪಾಟೀಲ, ಗಣೇಶ ಕೋಕಾಟೆ, ನಾಗನಗೌಡ ಸಾತ್ಮಾರ, ಸತೀಶ ಪಾಟೀಲ, ನಾಗರಾಜ ಶಿಬರಗಟ್ಟಿ, ಸೇರಿದಂತೆ ಅನೇಕ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

