ವನ್ಯಜೀವಿ ಸಂರಕ್ಷಣೆಯಲ್ಲಿ ಪಶುವೈದ್ಯರ ಪಾತ್ರ ಮಹತ್ವದ್ದು: ಮಾನವ-ಕಾಡು ಪ್ರಾಣಿಗಳ ಸಂಘರ್ಷ ಕುರಿತು ತರಬೇತಿ ಕಾರ್ಯಾಗಾರ

Spread the love

ಧಾರವಾಡ: ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ವನ್ಯಜೀವಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುವ ಪ್ರಕ್ರಿಯೆಯಲ್ಲಿ ಪಶುವೈದ್ಯರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ತಮಿಳುನಾಡು ಕೇಡರ್‌ನ ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಡಾ. ಟಿ.ವಿ. ಮಂಜುನಾಥ ಅವರು ಅಭಿಪ್ರಾಯಪಟ್ಟರು. ಇತ್ತೀಚೆಗೆ ಧಾರವಾಡದ ಅರಣ್ಯ ಇಲಾಖೆ ಹಾಗೂ ಹ್ಯುಮನ್ ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕ ಅರಣ್ಯ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ‘ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಹಾಗೂ ಪರಿಹಾರ’ ಕುರಿತ ವಿಚಾರ ಸಂಕೀರ್ಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾಡು ಪ್ರಾಣಿಗಳು ಮನುಷ್ಯ ವಾಸಸ್ಥಾನದ ಮೇಲೆ ಲಗ್ಗೆ ಇಡುತ್ತಿರುವ ಸಂದರ್ಭಗಳಲ್ಲಿ ಪಶುವೈದ್ಯರು ಅತ್ಯಂತ ಜಾಗೃತಿಯಿಂದ ಕಾರ್ಯಾಚರಣೆ ನಡೆಸಬೇಕೆಂದು ಅವರು ಕಿವಿಮಾತು ಹೇಳಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ. ನಾಗರಾಜ ಹೆಚ್. ಅವರು ಮಾತನಾಡಿ, ಇಲಾಖೆಯ ವೈದ್ಯರು ಇದುವರೆಗೆ ಸಾಕು ಪ್ರಾಣಿಗಳ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ ಈಗಿನ ತುರ್ತು ಪರಿಸ್ಥಿತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಅರವಳಿಕೆ ಮದ್ದು ನೀಡುವ ಕಾರ್ಯವನ್ನೂ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಪ್ರಾಯೋಗಿಕವಾಗಿ ‘ಡಾರ್ಟ್ ಗನ್’ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಕರ್ನಾಟಕ ಅರಣ್ಯ ಅಕಾಡೆಮಿ ಮುಖ್ಯಸ್ಥ ಶಿವಶರಣಯ್ಯ ಅವರು ಮಾತನಾಡಿ, ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಪಶುವೈದ್ಯರಿಗಾಗಿ ವನ್ಯಜೀವಿ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.

​ವಿಚಾರ ಸಂಕೀರ್ಣದಲ್ಲಿ ತಮಿಳುನಾಡಿನ ವನ್ಯಜೀವಿ ಪಶುವೈದ್ಯೆ ಡಾ. ವಿಶಾಖಾ ವಾಸುಕಿ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಡಾ. ಪ್ರವಿತಾ ಜೈನ್ ಹಾಗೂ ಕಾಳಿ ಟೈಗರ್ ಪ್ರಾಜೆಕ್ಟ್‌ನ ಡಾ. ಪ್ರದೀಪ ಅವರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವುದು, ಅರವಳಿಕೆ ಪ್ರಯೋಗ ಮತ್ತು ಡಾರ್ಟ್ ಗನ್ ಬಳಕೆ ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಹ್ಯುಮನ್ ಸಂಸ್ಥೆಯ ತಜ್ಞ ರಮೇಶ ಅವರು ಪ್ರಾಣಿ ಕಲ್ಯಾಣ ಕಾನೂನುಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 25 ಪಶುವೈದ್ಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಪಿ. ಹಿರೇಮಠ ಅವರು ಸ್ವಾಗತಿಸಿದರೆ, ಡಾ. ಅಫ್ತಾಬ್ ಅವರು ವಂದಿಸಿದರು.

Leave a Reply

Your email address will not be published. Required fields are marked *