

ಧಾರವಾಡ: ಕನ್ನಡದ ಮೊಟ್ಟಮೊದಲ ಸಾಹಿತ್ಯಕ ಪತ್ರಿಕೆಯಾಗಿ 1896ರಲ್ಲಿ ಪ್ರಾರಂಭಗೊಂಡ ‘ವಾಗ್ಭೂಷಣ’ ಪತ್ರಿಕೆಯನ್ನು ಕಾಲಾಂತರದಲ್ಲಿ ನಿಂತುಹೋಗಿದ್ದರೂ ಮತ್ತೆ ಪ್ರಾರಂಭಿಸಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ (ಕವಿವ ಸಂಘ) ವಿನೂತನ ಸಾಧನೆಯಾಗಿದೆ ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ 18ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ವಾಗ್ಭೂಷಣ ಪತ್ರಿಕೆ ಮೂವತ್ತೈದು ವರ್ಷಗಳ ಕಾಲ ಪ್ರಕಟಣೆಗೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ಮೈಲುಗಲ್ಲಾಗಿ ನಿಂತಿದೆ. ಹಿಂದಿನ ವಾಗ್ಭೂಷಣ ಪತ್ರಿಕೆಗಳನ್ನು ಅವಲೋಕಿಸಿದರೆ ಈ ನೆಲದ ಬಹು ದೊಡ್ಡ ಸಾಹಿತ್ಯಿಕ ನಿಧಿಯೇ ಅಡಗಿದೆ. ಕವಿವ ಸಂಘವು ತನ್ನ ಮೊದಲ ವರ್ಷದ ಉಪನಿಬಂಧನೆಗಳಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ಸದಾ ಸಾಹಿತ್ಯ, ಸಂಸ್ಕೃತಿ ವರ್ಧನೆಗಾಗಿ ತೊಡಗಿಸಿಕೊಳ್ಳುವುದಾಗಿ ದಾಖಲಿಸಿದೆ. ಅದರಂತೆಯೇ ಇಂದಿಗೂ ಸಂಘವು ಯಾವುದೇ ರಾಜಕೀಯಕ್ಕೆ ವಾಲದೆ ಸದಾ ಕನ್ನಡ, ಕನ್ನಡಿಗ, ಕರ್ನಾಟಕ ಮಂತ್ರವಾಗಿಸಿಕೊಂಡು ತೊಡಗಿಸಿಕೊಂಡಿದೆ ಎಂದು ಶಂಕರ ಹಲಗತ್ತಿ ಹೇಳಿದರು.
ಸಂಘದ ಪಾರದರ್ಶಕ ಆಡಳಿತದ ಕುರಿತು ಮಾತನಾಡಿದ ಅವರು, ಕವಿವ ಸಂಘವು ಪ್ರಾರಂಭದಿಂದಲೇ ತನ್ನ ಲೆಕ್ಕಪತ್ರಗಳು ಮತ್ತು ಖರ್ಚು ವೆಚ್ಚವನ್ನು ಅತ್ಯಂತ ಪಾರದರ್ಶಕವಾಗಿ ಇಟ್ಟುಕೊಂಡು ಬಂದಿರುವುದನ್ನು 1918ರ ವಾಗ್ಭೂಷಣ ಪತ್ರಿಕೆಯಲ್ಲಿಯೇ ದಾಖಲಿಸಲಾಗಿದೆ. ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಂಘವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕವಾಗಿ ನಡೆಯುತ್ತಿರುವುದು ಸಂಘದ ನಿಜವಾದ ಶಕ್ತಿ ಮತ್ತು ಘನತೆಯಾಗಿದೆ. ಕನ್ನಡ ಪುಸ್ತಕಗಳು ಓದಲು ದೊರೆಯದಿದ್ದ ಕಾಲದಲ್ಲಿ ಸಂಘವು ಕನ್ನಡ ಪುಸ್ತಕಗಳನ್ನು ಬರೆಯಿಸಲು ಪ್ರೋತ್ಸಾಹದ ಬಹುಮಾನ ನೀಡಿ ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಿಸಿದ ಕೀರ್ತಿ ಸಂಘಕ್ಕಿದೆ. ಆದರೆ, ಇಂದು ಕನ್ನಡ ಪುಸ್ತಕಗಳ ರಾಶಿ ರಾಶಿ ಇದ್ದರೂ, ಓದುವವರಿಲ್ಲದೆ ಪುಸ್ತಕಗಳು ಕೊಳೆಯುವ ಸ್ಥಿತಿ ಬಂದೊದಗಿದ್ದು ವಿಪರ್ಯಾಸ ಎಂದರು.
ಮಹಿಳೆಯರು ಸಾಹಿತ್ಯ ರಚನೆಯಲ್ಲಿ ಮುಂದುವರಿಯದೇ ಇದ್ದ ಕಾಲದಲ್ಲಿ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಮೂಲಕ ಬಹುಮಾನ ನೀಡುವ ಪರಂಪರೆಯನ್ನು ಮುಂದುವರೆಸಿ, ಇಂದು ನೂರಾರು ಮಹಿಳಾ ಶ್ರೇಷ್ಠ ಲೇಖಕಿಯರು ಸೃಷ್ಟಿಯಾಗುವಲ್ಲಿ ಯಶ ಕಂಡಿದೆ. ಸಂಘವು ಒಂಬತ್ತು ಸಾವಿರಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಹೊಂದಿದ್ದು, ಅವರ ನೆರವಿನಲ್ಲಿ ಸಂಘವು ಇನ್ನಷ್ಟು ಸ್ವಾವಲಂಬಿಯಾಗಿ ಕಾರ್ಯಮಾಡುವ ಕುರಿತು ಯೋಚಿಸುತ್ತಿದೆ. ಪುನರಾರಂಭಿಸಿದ ವಾಗ್ಭೂಷಣ ಪತ್ರಿಕೆಯನ್ನು ಆಜೀವ ಸದಸ್ಯರು ಕೊಂಡುಕೊಂಡು ಬೆಳೆಸುವಂತಾಗಬೇಕು ಎಂದು ಅವರು ಸಭಿಕರಲ್ಲಿ ಕೇಳಿಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎ. ಚಿಕ್ಕಮಠ ಮಾತನಾಡಿ, ಕವಿವ ಸಂಘವು ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ ‘ಧರೆಗೆ ದೊಡ್ಡವರು’ ಹಾಗೂ ಸಾಧಕರ ಸನ್ಮಾನಗಳು ಯೋಗ್ಯ ವ್ಯಕ್ತಿಗಳಿಗೆ ಸಂದ ಗೌರವಗಳಾಗಿವೆ. ಈ ಎರಡೂ ಕಾರ್ಯಕ್ರಮಗಳು ಅತೀ ಹೆಚ್ಚು ಜನಮನ್ನಣೆ ಪಡೆದಿವೆ. ಕವಿವ ಸಂಘವು ವಿದ್ಯೆಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ದೊಡ್ಡ ಸಾಧನೆಯಾಗಿದ್ದು, ಆಡಳಿತ ಮಂಡಳಿಯ ಎಲ್ಲರೂ ಕ್ರಿಯಾಶೀಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗಾಯತ್ರಿ ಸರದೇಶಪಾಂಡೆ ಹಾಗೂ ಗುರುನಾಥ ಅವರಿಂದ ಕುಮಾರವ್ಯಾಸ ಭಾರತದ ಕಥಾ ಗಮಕ ಪ್ರಸಂಗಗಳ ಬಗ್ಗೆ ವ್ಯಾಖ್ಯಾನ ಮಾಡಲಾಯಿತು. ನಂತರ ಆರೋಹಿ ಸದಾಶಿವ ಐಹೊಳೆ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಅಮರಶೆಟ್ಟಿ ನಿರೂಪಿಸಿ, ವಂದಿಸಿದರು. ಸಿ. ಎಸ್. ಪಾಟೀಲಕುಲಕರ್ಣಿ, ಲಾಲಸಾಬ ಬೂದಿಹಾಳ, ಶಂಕರ ಘಟ್ನಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

