ಸೇವೆಯಿಂದ ನಿವೃತ್ತರಾದರೂ ‘ವೃತ್ತಿ’ಯಿಂದಲ್ಲ: ಸಂಬಳವಿಲ್ಲದೆ ಪಾಠ ಮುಂದುವರಿಸಿದ ಶಿಕ್ಷಕ!

Spread the love

ನವಲಗುಂದ: ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೆಲಸದಿಂದ ವಿರಮಿಸಲು ಕಾತುರರಾಗಿರುತ್ತಾರೆ. ಆದರೆ, ಇಲ್ಲೊಬ್ಬ ಶಿಕ್ಷಕರು ನಿವೃತ್ತರಾಗಿ ತಿಂಗಳುಗಳೇ ಕಳೆದರೂ, ಮಕ್ಕಳ ಮೇಲಿನ ಕಾಳಜಿಯಿಂದ ಸಂಬಳವಿಲ್ಲದೆ ಪಾಠ ಮುಂದುವರಿಸುವ ಮೂಲಕ ಮಾನವೀಯತೆಯ ಅಪರೂಪದ ಮಾದರಿಯಾಗಿದ್ದಾರೆ.

​ಪಟ್ಟಣದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ನಂ-1ರ ಕನ್ನಡ ವಿಷಯದ ಶಿಕ್ಷಕರಾದ ಸತೀಶ ಕುಲಕರ್ಣಿ ಅವರೇ ಈ ಮಾದರಿ ವ್ಯಕ್ತಿತ್ವ. ಇವರು ಕಳೆದ 2025ರ ನವೆಂಬರ್ 30ರಂದು ಸರ್ಕಾರಿ ಸೇವೆಗೆ ಅಧಿಕೃತವಾಗಿ ನಿವೃತ್ತಿ ಹೊಂದಿದ್ದರು. ನಿಯಮದ ಪ್ರಕಾರ ಇವರು ಶಾಲೆಗೆ ಬರುವ ಹಾಗಿಲ್ಲ. ಆದರೆ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ತಾವು ಹೋದರೆ ಮಕ್ಕಳಿಗೆ ಕನ್ನಡ ವಿಷಯದ ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ಕುಲಕರ್ಣಿ ಅವರು, ನಿತ್ಯ ಶಾಲೆಗೆ ಬಂದು ಸ್ವಯಂಪ್ರೇರಿತವಾಗಿ ಪಾಠ ಮಾಡುತ್ತಿದ್ದಾರೆ.

​ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಕೆಲ ಶಿಕ್ಷಕರೇ ಶಾಲೆಗೆ ಸರಿಯಾಗಿ ಬಾರದಿರುವ ಇಂದಿನ ಕಾಲಘಟ್ಟದಲ್ಲಿ, ನಿವೃತ್ತಿಯ ನಂತರವೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶಾಲೆಯ ಆಡಳಿತಾತ್ಮಕ ಕೆಲಸಗಳಲ್ಲೂ ನೆರವಾಗುತ್ತಿರುವ ಇವರ ಸೇವೆಗೆ ಶಾಲಾ ಸಿಬ್ಬಂದಿ ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಣ್ಯರ ಮತ್ತು ಸಹದ್ಯೋಗಿಗಳ ಮೆಚ್ಚುಗೆ (ಬಾಕ್ಸ್ ಸುದ್ದಿ)

ವೃತ್ತಿಯಿಂದ ನಿವೃತ್ತರಾಗಿಲ್ಲ

“ತಮ್ಮ ಸೇವೆಯಿಂದ ನಿವೃತ್ತಿಯಾದರೂ ಸಹ ವೃತ್ತಿಯಿಂದ ನಿವೃತ್ತರಾಗಿಲ್ಲ ಎನ್ನುವಂತೆ ಕುಲಕರ್ಣಿ ಗುರುಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಆಗಬಾರದು ಎಂದು ಶಾಲೆಗೆ ಬಂದು ಪಾಠ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅವರ ಈ ನಿಸ್ವಾರ್ಥ ಸೇವೆಗೆ ನಾನು ಎಂದೂ ಚಿರಋಣಿಯಾಗಿರುತ್ತೇನೆ.”

– ಮಹಮ್ಮದಲಿ ಮಿರ್ಜಿ, ಯುವ ಮುಖಂಡರು, ನವಲಗುಂದ

ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಹೆಚ್ಚಿದೆ

“ಇಂದಿನ ಕಾಲದಲ್ಲಿ ನಿವೃತ್ತಿಯ ದಿನಾಂಕಕ್ಕಾಗಿ ಕಾಯುವವರೇ ಹೆಚ್ಚು. ಆದರೆ ಸತೀಶ ಕುಲಕರ್ಣಿ ಸರ್ ಅವರು ನಿವೃತ್ತಿಯ ನಂತರವೂ ಶಾಲೆಗೆ ಬಂದು ಪಾಠ ಮಾಡುತ್ತಿರುವುದು ನೋಡಿದರೆ ಆಶ್ಚರ್ಯ ಮತ್ತು ಹೆಮ್ಮೆ ಎನಿಸುತ್ತದೆ. ಇಂತಹ ಶಿಕ್ಷಕರಿಂದಲೇ ನಮ್ಮ ಸರ್ಕಾರಿ ಶಾಲೆಗಳ ಮೇಲೆ ಜನರ ನಂಬಿಕೆ ಹೆಚ್ಚುತ್ತಿದೆ.”

– ಅನ್ವರಹುಸೇನ ಮೂಲಿಮನಿ, ಉಪಾಧ್ಯಕ್ಷರು, ಅಂಜುಮನ್ ಸಂಸ್ಥೆ

ನಮ್ಮೂರಿನ ಆಸ್ತಿ

“ಸತೀಶ ಕುಲಕರ್ಣಿ ಅವರು ನಮ್ಮೂರಿನ ಆಸ್ತಿ. ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದರೂ, ಬದ್ಧತೆಯಿಂದ ಅವರು ನಿವೃತ್ತರಾಗಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ ಅವರು ಮಾಡುತ್ತಿರುವ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ. ಅವರ ಈ ಸಕ್ರಿಯ ಜೀವನ ಎಲ್ಲರಿಗೂ ದಾರಿದೀಪ.”

– ಮಾಬುಸಾಬ ಯರಗುಪ್ಪಿ, ಸಮಾಜ ಸೇವಕರು

ಸೇವೆ ಮರೆಯಲಾರದ್ದು

“ಕುಲಕರ್ಣಿ ಸರ್ ಅವರು ಇದೇ ಶಾಲೆಯಲ್ಲಿಯೇ ನಿವೃತ್ತಿ ಹೊಂದಿದ್ದರೂ ಸೇವಾ ಮನೋಭಾವ ಮರೆತಿಲ್ಲ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾದೀತು ಎಂದು ಕನ್ನಡ ವಿಷಯದಲ್ಲಿ ಉಳಿದಿರುವಂತಹ ಪಾಠವನ್ನು ಪ್ರತಿದಿನ ಬಂದು ಹೇಳಿಕೊಡುತ್ತಾರೆ. ಅವರ ಈ ಸೇವೆ ಮರೆಯಲಾರದ್ದು.”

– ಡಬ್ಲೂ. ಎಸ್. ಪಿರ್ಜಾದೆ, ಪ್ರಧಾನ ಗುರುಗಳು, ಸರ್ಕಾರಿ ಉರ್ದು ಶಾಲೆ ನಂ-1

Leave a Reply

Your email address will not be published. Required fields are marked *