ಕನ್ನಡ ಜಾಗೃತಿ ಸಮಿತಿ ನೇಮಕ ಯಥಾಪ್ರಕಾರ ಮುಂದುವರಿಸಲು ಸಚಿವ ಸಂತೋಷ್ ಲಾಡ್‌ಗೆ ಮನವಿ

Spread the love

ಧಾರವಾಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಧಾರವಾಡ ಜಿಲ್ಲಾ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಕನ್ನಡ ಜಾಗೃತಿ ಸಮಿತಿಗೆ ನಾಮನಿರ್ದೇಶನಗೊಂಡ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ, ತಮ್ಮ ನೇಮಕಕ್ಕೆ ತಡೆ ಒಡ್ಡಿರುವ ಪತ್ರವನ್ನು ವಾಪಸ್ ಪಡೆದು, ಸಮಿತಿಗಳನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಮನವಿ ಸಲ್ಲಿಸಿದರು.

ಕನ್ನಡ ಸೇವೆ ಗುರುತಿಸಿ ನೇಮಕ:

​ಸಚಿವರನ್ನು ಭೇಟಿ ಮಾಡಿದ ಸದಸ್ಯರು, “ನಾವು ನಮ್ಮ ನಿತ್ಯದ ಕೆಲಸದ ಜೊತೆಗೆ ದಶಕಗಳಿಂದ ಕನ್ನಡ ಸೇವೆಯಲ್ಲಿ ತೊಡಗಿದ್ದೇವೆ. ನಮ್ಮಲ್ಲಿ ಕೆಲವರು ಬೀದಿ ಹೋರಾಟಕ್ಕಿಳಿದು ತ್ಯಾಗ ಮಾಡಿದವರಿದ್ದರೆ, ಮತ್ತೆ ಕೆಲವರು ಕತೆ-ಕವನಗಳ ರಚನೆ ಮೂಲಕ ಕನ್ನಡ ಕಟ್ಟಿದವರಿದ್ದೇವೆ. ಪತ್ರ ಚಳವಳಿ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ಕಾರ್ಪೊರೇಟ್ ಕಂಪನಿಗಳಲ್ಲಿ ಕನ್ನಡ ಅನುಷ್ಠಾನದ ಮನವರಿಕೆ ಮಾಡಿದ್ದೇವೆ. ನಮ್ಮ ಈ ಅರ್ಹತೆ ಹಾಗೂ ಸೇವೆಯನ್ನು ಗಮನಿಸಿಯೇ ಪ್ರಾಧಿಕಾರ ನಮ್ಮನ್ನು ಅಳೆದುತೂಗಿ ಸಮಿತಿಗೆ ಶಿಫಾರಸು ಮಾಡಿ ನೇಮಕ ಮಾಡಿತ್ತು. ನಾವು ಯಾರೂ ಅರ್ಜಿ ಹಾಕಿದವರಲ್ಲ, ಆದರೂ ನೇಮಕವಾದಾಗ ನಮಗೆ ಹೆಮ್ಮೆಯಾಗಿತ್ತು,” ಎಂದು ತಮ್ಮ ಅಳಲು ತೋಡಿಕೊಂಡರು.

ತಡೆಯಾಜ್ಞೆಯಿಂದ ಸಾರ್ವಜನಿಕ ಅವಮಾನ:

​”ಆದರೆ, ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ಪ್ರಾಧಿಕಾರಕ್ಕೆ ಪತ್ರ ಬರೆದು, ನಮ್ಮ ನೇಮಕವನ್ನು ತಡೆ ಹಿಡಿಯುವಂತೆ ಕೋರಿದ್ದೀರಿ. ಈ ಪತ್ರದ ಕಾರಣದಿಂದ ನಮ್ಮ ನೇಮಕಕ್ಕೆ ತಡೆಹಿಡಿಯಲಾಗಿದೆ. ಇದರಿಂದ ನಮಗೆ ಸಾರ್ವಜನಿಕವಾಗಿ ಅವಮಾನವಾದಂತಾಗಿದೆ. ಇಂತಹ ಘಟನೆಗಳು ಯಾವುದೇ ಕನ್ನಡದ ಜಿಜ್ಞಾಸುಗಳಿಗೆ ಪುನರಾವರ್ತನೆಯಾಗಬಾರದು,” ಎಂದು ಸಚಿವರ ಮೂಲಕ ಸರ್ಕಾರಕ್ಕೆ ವಿನಂತಿಸಿಕೊಂಡರು.

ಉದ್ದೇಶಪೂರ್ವಕ ಸಮಿತಿ ರಚನೆ:

​ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸುವ ಉದ್ದೇಶವನ್ನು ಸಚಿವರಿಗೆ ಮನವರಿಕೆ ಮಾಡಿದ ಸದಸ್ಯರು, ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನದ ಉದಾತ್ತ ಉದ್ದೇಶದೊಂದಿಗೆ ಈ ಸಮಿತಿಗಳನ್ನು ರಚಿಸಿದ್ದರು. ಇದರಿಂದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಆದರೆ, ಇನ್ನೂ ಸಂಪೂರ್ಣವಾಗಿ ಕನ್ನಡ ಅನುಷ್ಠಾನವಾಗದಿರುವುದರಿಂದ ಈ ಸಮಿತಿಗಳ ಮುಂದುವರಿಕೆ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲು ಆಗ್ರಹ:

​ಸಚಿವರು ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು, ತಮ್ಮ ನೇಮಕವನ್ನು ಮತ್ತು ಕನ್ನಡ ಜಾಗೃತಿ ಸಮಿತಿಗಳನ್ನು ಯಥಾಪ್ರಕಾರ ಮುಂದುವರಿಸುವಂತೆ ಸೂಚಿಸಬೇಕು. ಈ ಬಿಕ್ಕಟ್ಟನ್ನು ಒಂದು ವಾರದೊಳಗೆ ಬಗೆಹರಿಸಿ, ಕರ್ನಾಟಕ ರಾಜ್ಯೋತ್ಸವದ ಹೊತ್ತಿಗೆ ಈಗ ನೇಮಕಗೊಂಡಿರುವ ಸದಸ್ಯರನ್ನೇ ಒಳಗೊಂಡು ಸಮಿತಿಗಳು ಕ್ರಿಯಾಶೀಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

​ಸಚಿವರು ಮನವಿ ಆಲಿಸಿ, ಕನ್ನಡ ಜಾಗೃತಿ ಸಮಿತಿಗೆ ತಮ್ಮಿಂದ ನೀಡಲಾಗಿರುವ ತಡೆಯನ್ನು ವಾಪಸ್ ಪಡೆದು, ಸರ್ಕಾರದ ನೇಮಕಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತು ಧಾರವಾಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಎಚ್.ಎ. ಇಲಕಲ್, ಸಂಗಮೇಶ ಮೆಣಸಿನಕಾಯಿ, ಅಮೃತ ಇಜಾರಿ, ಸಿದ್ರಾಮ್ ಹಿಪ್ಪರಗಿ, ಸುಧೀರ ಮುಧೋಳ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *