
ಧಾರವಾಡ: ಬಾಲ್ಯವಿವಾಹ ಎಂಬುದು ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿರ್ಮೂಲನೆ ಮಾಡುವಲ್ಲಿ ಧಾರ್ಮಿಕ ಮುಖಂಡರ ಪಾತ್ರ ಮಹತ್ವದ್ದಾಗಿದೆ. ವಿವಾಹ ನಿಶ್ಚಯಿಸುವ ಸಂದರ್ಭದಲ್ಲಿ ವಯಸ್ಸಿನ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ತಪ್ಪಿದಲ್ಲಿ ಅದರಲ್ಲಿ ಭಾಗಿಯಾಗುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಎಚ್ಚರಿಕೆ ನೀಡಿದರು.
‘ಬಾಲ್ಯವಿವಾಹ ಮುಕ್ತ ಭಾರತ-100 ದಿನಗಳ ಅಭಿಯಾನ’ದ ಅಂಗವಾಗಿ ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕ್ಫ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಎಡಿಆರ್ ಕಟ್ಟಡದಲ್ಲಿ ಮಂಗಳವಾರ ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷರು ಹಾಗೂ ಮೌಲಾನಾಗಳಿಗಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುವ ತಂದೆ-ತಾಯಿ, ಕಲ್ಯಾಣ ಮಂಟಪದ ಮಾಲೀಕರು, ಪುರೋಹಿತರು, ಮೌಲ್ವಿಗಳು ಹಾಗೂ ಛಾಯಾಗ್ರಾಹಕರು ಸೇರಿದಂತೆ ಎಲ್ಲರನ್ನೂ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ ಎಂದು ಕಾನೂನಿನ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವೈ. ಪಾಟೀಲ, ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಿ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡಿ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಿ.ಎ. ಜಾಗೀರದಾರ ಮಾತನಾಡಿ, ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು. ತಮ್ಮ ಜಮಾತ್ ಮೂಲಕ ಬಾಲ್ಯವಿವಾಹ ತಡೆಗಟ್ಟಲು ವಿಶೇಷ ಸುತ್ತೋಲೆ ಹೊರಡಿಸಿ, ಸರ್ಕಾರದ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನೂರಜಹಾನ ಕಿಲ್ಲೇದಾರ, ಮದುವೆ ಸಂದರ್ಭದಲ್ಲಿ ವಯಸ್ಸಿನ ದೃಢೀಕರಣಕ್ಕೆ ಜನ್ಮ ದಾಖಲೆ ಅಥವಾ ಶಾಲಾ ದಾಖಲಾತಿಗಳನ್ನೇ ಮಾನದಂಡವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮಸೀದಿಗಳ ಅಧ್ಯಕ್ಷರು ಮತ್ತು ಮೌಲಾನಾಗಳಿಗೆ ಈ ಸಭೆ ಆಯೋಜಿಸಲಾಗಿದೆ. ಮುಂದಿನ ಹಂತದಲ್ಲಿ ಕಲ್ಯಾಣ ಮಂಟಪದ ಮಾಲೀಕರು, ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗೂ ಪುರೋಹಿತರಿಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶಾದಿ ಮಹಲ್ ಹಾಗೂ ಜಮಾತ್‌ಗಳು ವಿವಾಹ ನೋಂದಣಿ ಅಥವಾ ಆಯೋಜನೆಗೂ ಮುನ್ನ ವಯಸ್ಸಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ ಹಾಶ್ಮದ ಹಿಂಡಸಗೇರಿ, ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷ ತಾಜುದ್ದಿನ್ ಶೇಖ ಪೆಂಡಾರಿ, ಮಹಮ್ಮದಲಿ ತಹಶೀಲ್ದಾರ, ಬಸಲಿಂಗಪ್ಪ ನೀರಲಕೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.

