
ಧಾರವಾಡ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಮಂಜಸವಾದ ಪ್ರಶ್ನೆಗಳನ್ನು ಕೇಳಿದಾಗ ಮಾತ್ರ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಬಹುದು. ಪ್ರಶ್ನೆ ಕೇಳುವುದರಿಂದ ತಾರ್ಕಿಕ ಶಕ್ತಿ ವೃದ್ಧಿಸುತ್ತದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾ ತಜ್ಞರಾದ ಪ್ರೊ. ಗಣೇಶ ಎನ್. ದೇವಿ ಅವರು ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ–2025 ಅಂಗವಾಗಿ ಆಯೋಜಿಸಿದ್ದ ತಿಂಗಳಪೂರ್ಣ ಕಾರ್ಯಕ್ರಮದ ಅಡಿಯಲ್ಲಿ ನಡೆದ ‘ಧರೆಗೆ ದೊಡ್ಡವರು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಗಣತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಆತಂಕ
ಕಿಟಲ್ ಪ್ರಥಮ ದರ್ಜೆ ಕಾಲೇಜುದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಡಾ. ಗಣೇಶ ಎನ್. ದೇವಿ ಅವರು ವಿವರವಾಗಿ ಉತ್ತರಿಸಿದರು.
“ಭಾರತದಲ್ಲಿ 2011ಕ್ಕೆ ಜನಗಣತಿ ಆಗಬೇಕಾಗಿತ್ತು, ಆಗಲಿಲ್ಲ. ಆದರೆ ನಿಖರ ಜನಗಣತಿ 2027ಕ್ಕೆ ಆಗಲಿದ್ದು, ನಿಜವಾದ ಜನಸಂಖ್ಯೆಯ ರೂಪರೇಷೆ ಸಿಗಲಿದೆ. ಅದಕ್ಕೆ ಯಾವುದೇ ಆತಂಕವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಪ್ರಜಾಪ್ರಭುತ್ವದ ಮೌಲ್ಯ ಕ್ಷೀಣವಾಗುತ್ತಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು. “ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು. ಆದರೆ ಪ್ರಪಂಚದಲ್ಲಿ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯವು 33ನೇ ಸ್ಥಾನದಿಂದ 24ನೇ ಸ್ಥಾನಕ್ಕೆ ಕುಸಿದಿದೆ,” ಎಂದು ಅವರು ಆತಂಕದಿಂದ ಹೇಳಿದರು.
ಮಹಿಳಾ ಸ್ವಾತಂತ್ರ್ಯದ ಕುರಿತು ಪ್ರಶ್ನಿಸುವ ಮನೋಭಾವ
ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಮಹಿಳಾ ಪರವಾಗಿ ಧ್ವನಿ ಎತ್ತಿ, ಮಹಿಳೆಯರಿಗೆ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ದೊರಕಬೇಕು ಎಂದು ಪ್ರತಿಪಾದಿಸಿದರೆ, ಮನುಸ್ಮೃತಿ ಅದರ ತದ್ವಿರುದ್ಧವಾಗಿ ಮಹಿಳೆಯರು ಮನೆಗೆ ಮಾತ್ರ ಸೀಮಿತ, ಯಾವ ಸ್ವಾತಂತ್ರ್ಯವೂ ಅವಳಿಗಿಲ್ಲ ಎನ್ನುತ್ತದೆ.
“ಇಂತಹ ವಿಷಯಗಳ ಕುರಿತು ಪ್ರಶ್ನಿಸುವ ಮನೋಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು,” ಎಂದು ಗಣೇಶ ದೇವಿ ಕರೆ ನೀಡಿದರು.
ಸಾಮಾಜಿಕ ಸಾಮರಸ್ಯದ ಕೊರತೆ
ಇಂದು ಭಾರತೀಯ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆ ತೀರ ಕೆಳಮಟ್ಟದಲ್ಲಿದೆ. ಭಾರತದಲ್ಲಿರುವ ಸುಮಾರು 4200 ಸಮುದಾಯಗಳು ಗೌರವದಿಂದ ಬದುಕುವ, ಸ್ವಾಭಿಮಾನದ ಜೀವನ ಸಾಗಿಸಬೇಕೆಂಬ ದಿವ್ಯ ಕನಸನ್ನು ಖ್ಯಾತ ಮಾನವಶಾಸ್ತ್ರಜ್ಞರು ಹೊಂದಿದ್ದರು. “ಇದು ನಿಜವಾದ ಸಾಮರಸ್ಯದ ಜನಬದುಕು,” ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವ ಜ್ಞಾನ ಮತ್ತು ಪ್ರಜಾಪ್ರಭುತ್ವದ ಹೊಣೆ
ವಿದ್ಯಾರ್ಥಿಗಳು ಬರೀ ದೇಶದ ಜ್ಞಾನ ಹೊಂದಿದರೆ ಸಾಲದು, ವಿಶ್ವದ ಜ್ಞಾನವನ್ನು ಹೊಂದುವುದು ಅವಶ್ಯವಿದೆ ಎಂದು ಅವರು ಹೇಳಿದರು. “ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ವಿಶ್ವದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ರೂಪಗೊಂಡಿವೆ. ಇವು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು,” ಎಂದು ಅವರು ಸಲಹೆ ನೀಡಿದರು.
12ನೇ ಶತಮಾನದಲ್ಲಿ ಸಮಾಜ ಸುಧಾರಕರಾದ ಬಸವಣ್ಣನವರು ಸಮಸಮಾಜ ನಿರ್ಮಾಣವಾಗಬೇಕು, ಸರ್ವರಿಗೂ ಸಮಬಾಳು ದೊರಕಬೇಕು ಎಂಬ ಕನಸು ಕಂಡು, “ನಾನು ಎಲ್ಲರಿಗಿಂತ ಕಿರಿಯ” ಎಂಬ ಹೃದಯ ವೈಶಾಲ್ಯವನ್ನು ತೋರಿದವರು ಎಂದು ಅವರು ಸ್ಮರಿಸಿದರು.
“ನಮ್ಮ ಭಾರತದ ಪ್ರಜಾಪ್ರಭುತ್ವದ ಸೂಚ್ಯಾಂಕ 103ನೇ ಸ್ಥಾನದಲ್ಲಿದೆ. ನಮ್ಮ ಪ್ರಜಾಪ್ರಭುತ್ವ ಸದೃಢವಾಗಲು ನಾವೆಲ್ಲರೂ ಸಶಕ್ತರಾಗಿ ಬಲಗೊಳಿಸಲು ಪ್ರಯತ್ನಿಸಬೇಕು. ಇದಕ್ಕೆ ಹೊಣೆಗಾರರು ಯಾರು ಎನ್ನುವುದಕ್ಕಿಂತ ಎಲ್ಲರೂ ಹೊಣೆಗಾರರೇ,” ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಯಾರನ್ನೂ ದ್ವೇಷಿಸಬಾರದು, ಮನನೋಯಿಸಬಾರದು, ತನ್ನಂತೆ ಇತರರು ಎಂಬ ಉದಾತ್ತ ಭಾವನೆ ಬೆಳೆಸಿಕೊಳ್ಳಬೇಕು. “ದೇಶವನ್ನು ಪ್ರೀತಿಸಬೇಕು,” ಎಂಬ ಸಂದೇಶವನ್ನು ಅವರು ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ ಮಾತನಾಡಿದರು. ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಂಕರ ಹಲಗತ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯ ಮೇಲೆ ಸುರೇಖಾದೇವಿ ಉಪಸ್ಥಿತರಿದ್ದರು.

