
ಧಾರವಾಡ: ಜಿಲ್ಲೆಯಲ್ಲಿ ಬೇಸಿಗೆ ಅವಧಿ ಆರಂಭವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಹೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಸರ್ಕಾರದ ನಿಯಮದಂತೆ ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕಡ್ಡಾಯವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ನಡೆದ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕಲಘಟಗಿ, ಅಳ್ನಾವರ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹಗಲು ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ತೀರಾ ಮಧ್ಯರಾತ್ರಿಯಲ್ಲಿ ವಿದ್ಯುತ್ ಪೂರೈಸುವುದರಿಂದ ರೈತರು ನೀರು ಹಾಯಿಸಲು ತೊಂದರೆ ಅನುಭವಿಸುತ್ತಿದ್ದಾರೆ, ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು ಎಂದು ಅವರು ತಿಳಿಸಿದರು.

ಅತೀ ಹೆಚ್ಚು ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಉನ್ನತೀಕರಣ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು. ಅಲ್ಲದೆ, ನಿಗದಿ, ಅರಳಿಕಟ್ಟಿ ಕ್ರಾಸ್ ಮತ್ತು ಬಮ್ಮಿಗಟ್ಟಿ ಗ್ರಾಮಗಳಲ್ಲಿ ಹೊಸ ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಇರುವ ಟೆಂಡರ್ ಹಾಗೂ ಗುತ್ತಿಗೆದಾರರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಲಭ್ಯವಿದ್ದು, ಅಧಿಕಾರಿಗಳು ಸಮರ್ಪಕ ವಿತರಣೆಗೆ ಆದ್ಯತೆ ನೀಡಬೇಕು. ರೈತರಿಗೆ ಅಗತ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು (ಟಿಸಿ) ವಿಳಂಬವಿಲ್ಲದೆ ಪೂರೈಸಲು ಹೆಚ್ಚಿನ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ, 2023ರಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಸಲಕಿನಕೊಪ್ಪ ಗ್ರಾಮದ ರೈತ ಮಾರುತಿ ಕೊನಪ್ಪನವರ ಅವರ ಪತ್ನಿ ಮಲ್ಲವ್ವ ಅವರಿಗೆ ಸಚಿವರು ಹೆಸ್ಕಾಂ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.
ಸಭೆಯಲ್ಲಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ, ಎಡಿಸಿ ಗೀತಾ ಸಿ.ಡಿ ಸೇರಿದಂತೆ ಹೆಸ್ಕಾಂ ಹಾಗೂ ಕೆಪಿಟಿಸಿಎಲ್‌ನ ಹಿರಿಯ ಇಂಜಿನಿಯರ್‌ಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

