ಭ್ರಷ್ಟ ವ್ಯವಸ್ಥೆಯ ವಿರುದ್ಧ ಕುಬಿಹಾಳ ಗ್ರಾ ಪಂ ಎದುರಿಗೆ ಇಂದು ಮರಣ ಮೃದಂಗದ ಸಂಶಯ: ಇಚ್ಛಾ ಮರಣಕ್ಕೆ ಮುಂದಾದ ಯುವಕ!

Spread the love

ಕುಂದಗೋಳ: ನಾಡಿನಲ್ಲಿ ಭ್ರಷ್ಟಾಚಾರದ ಹಾವಳಿ ಎಷ್ಟರಮಟ್ಟಿಗೆ ಮಿತಿಮೀರಿದೆ ಎಂದರೆ, ಸಾಮಾನ್ಯ ಪ್ರಜೆಯೊಬ್ಬ ಭ್ರಷ್ಟರ ಕೂಪದಲ್ಲಿ ಬದುಕಲಾರದೆ ಸಾವನ್ನೇ ಅಪ್ಪಿಕೊಳ್ಳಲು ನಿರ್ಧರಿಸುವಂತಹ ಭೀಕರ ಪರಿಸ್ಥಿತಿ ಇಂದು ಎದುರಾಗಿದೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವಕ ನಾಗರಾಜ್ ಗುರುಸಿದ್ದಪ್ಪ ಹುಬ್ಬಳ್ಳಿ ಎಂಬುವವರು ವ್ಯವಸ್ಥೆಯ ಭ್ರಷ್ಟಾಚಾರಕ್ಕೆ ಬೇಸತ್ತು ಇಂದು (ಜ. 9) ಕುಬಿಹಾಳ ಗ್ರಾಮ ಪಂಚಾಯಿತಿ ಮುಂದೆ ‘ಇಚ್ಛಾ ಮರಣ’ಕ್ಕೆ ಮುಂದಾಗುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ.

​ಸಾಮಾನ್ಯವಾಗಿ ಭ್ರಷ್ಟಾಚಾರ ಕಂಡಾಗ ಜನರು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸುವುದು, ಲೋಕಾಯುಕ್ತಕ್ಕೆ ದೂರು ನೀಡುವುದು ಅಥವಾ ಬೀದಿಗಿಳಿದು ಪ್ರತಿಭಟನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ನಾಗರಾಜ್ ಅವರು ಇವೆಲ್ಲಾ ಹೋರಾಟಗಳನ್ನು ಮಾಡಿ ಸೋತು, ಕೊನೆಗೆ ನ್ಯಾಯ ಸಿಗದ ಹತಾಶೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಂಡಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕುಬಿಹಾಳ ಸೇರಿದಂತೆ ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇವರು, ಈ ಭ್ರಷ್ಟರ ನಡುವೆ ಸ್ವಾಭಿಮಾನದಿಂದ ಬದುಕಲು ಸಾಧ್ಯವೇ ಇಲ್ಲ ಎಂದು ಮನನೊಂದಿದ್ದಾರೆ. ಈ ಸಂಬಂಧ ಈಗಾಗಲೇ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಧಿಕೃತವಾಗಿ ಪತ್ರ ನೀಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

​ತಾನು ಇಚ್ಛಾ ಮರಣ ಹೊಂದುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿ ಇರಬೇಕೆಂದು ಪತ್ರದಲ್ಲಿ ಉಲ್ಲೇಖಿಸುವ ಮೂಲಕ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೌನವನ್ನೇ ನಾಗರಾಜ್ ಪ್ರಶ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ರಾಜು ಮಾವರಕರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್, ಪಿಎಸ್ಐ ಇಮ್ರಾನ್ ಪಠಾಣ್ ಹಾಗೂ ವೈದ್ಯಕೀಯ ತಂಡದವರು ಯುವಕನ ಮನವೊಲಿಸಲು ಹರಸಾಹಸ ಪಟ್ಟಿದ್ದಾರಾದರೂ, ಯುವಕ ಮಾತ್ರ ತನ್ನ ನಿರ್ಧಾರಕ್ಕೆ ಅಚಲವಾಗಿದ್ದಾರೆ. “ಭ್ರಷ್ಟಾಚಾರ ಮುಕ್ತವಾಗದ ಸಮಾಜದಲ್ಲಿ ಬದುಕುವುದಕ್ಕಿಂತ ಸಾವು ಲೇಸು” ಎಂಬ ನಾಗರಾಜ್ ಅವರ ವಾದವು ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಖಂಡಿಸುವಂತಿದೆ.

​ಒಬ್ಬ ವ್ಯಕ್ತಿ ಸಾವಿನ ನಿರ್ಧಾರಕ್ಕೆ ಬರುವವರೆಗೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರಿಗೆ ರಕ್ಷಣೆ ನೀಡುವ ಬದಲು, ಅವರನ್ನು ಸಾವಿನ ಅಂಚಿಗೆ ದೂಡುತ್ತಿರುವ ಈ ವ್ಯವಸ್ಥೆಯನ್ನು ನಾಗರಿಕ ಸಮಾಜ ತೀವ್ರವಾಗಿ ಖಂಡಿಸುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ನಾಗರಾಜ್‌ಗೆ ನ್ಯಾಯ ನೀಡುತ್ತದೆಯೇ ಅಥವಾ ಮತ್ತೊಂದು ಬಲಿಗಾಗಿ ಕಾಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *