ಸುಸ್ಥಿರ ಅಭಿವೃದ್ಧಿಗಾಗಿ ಕೆಳಮಟ್ಟದ ಬೇಡಿಕೆಗಳಿಗೆ ಆದ್ಯತೆ ನೀಡಿ: ವಾರ್ಷಿಕ ಯೋಜನೆ ತಯಾರಿಕೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ

Spread the love

ಧಾರವಾಡ (ಅ. 31): ಜಿಲ್ಲೆಯ ಭವಿಷ್ಯದ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಸ್ಥಿರ ಅಭಿವೃದ್ಧಿಗಾಗಿ ಗ್ರಾಮ ಮತ್ತು ಕ್ಷೇತ್ರ ಮಟ್ಟದ ಮೂಲ ಬೇಡಿಕೆಗಳಿಗೆ ಆದ್ಯತೆ ನೀಡಿ ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆಯನ್ನು (2026-27) ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂದು (ಅ. 31) ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತ ಪುನರ್ ಮನನ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲ ಹಂತದ ಸಂಸ್ಥೆಗಳ ಸಮನ್ವಯದ ಮೇಲೆ ಯೋಜನೆ ರೂಪಿಸಿ
ಯೋಜನಾ ವರದಿಯನ್ನು ರೂಪಿಸುವಾಗ ಗ್ರಾಮೀಣ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಸಮನ್ವಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಸ್ಥಳೀಯ ಅವಶ್ಯಕತೆಗಳು, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವಾರ್ಷಿಕ ಅಭಿವೃದ್ಧಿ ಯೋಜನಾ ವರದಿಯು ಗ್ರಾಮಸ್ಥರು ಮತ್ತು ನಗರವಾಸಿಗಳ ಆಶಯಗಳನ್ನು ಒಳಗೊಂಡಿರಬೇಕು. ಆದರೆ, ಯೋಜನೆಗಳು ಪರಸ್ಪರ ಪ್ರತಿರೂಪವಾಗದಂತೆ ಎಚ್ಚರಿಕೆ ವಹಿಸಿ ಲಭ್ಯವಿರುವ ಅನುದಾನವನ್ನು ಗಮನಿಸಿ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ಸಮಾಜ ಕಲ್ಯಾಣ ಮತ್ತು ಕ್ರೀಡೆ ಸೇರಿದಂತೆ ಪ್ರಮುಖ ಇಲಾಖೆಗಳ ಆಶಯಗಳನ್ನು ಪ್ರತಿನಿಧಿಸುವಂತೆ ಯೋಜನೆಯನ್ನು ರೂಪಿಸಬೇಕು. ಗ್ರಾಮ ಪಂಚಾಯತ್‌ನಿಂದ ಹಿಡಿದು ಮಹಾನಗರ ಪಾಲಿಕೆಯವರೆಗಿನ ಎಲ್ಲ ಸ್ಥಳೀಯ ಸಂಸ್ಥೆಗಳ ಬೇಡಿಕೆಗಳನ್ನು ಇದು ಒಳಗೊಂಡಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಯೋಜನೆ ಸಲ್ಲಿಸಲು ಕಟ್ಟುನಿಟ್ಟಿನ ಕಾಲಮಿತಿ ನಿಗದಿ
ಜಿಲ್ಲಾ ಯೋಜನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲು ಕಟ್ಟುನಿಟ್ಟಿನ ಕಾಲಮಿತಿಯನ್ನು ವಿಧಿಸಿದರು. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮದ ಬೇಡಿಕೆಗಳ ಪಟ್ಟಿಯನ್ನು ತಯಾರಿಸಿ, ಕ್ರೂಢೀಕರಿಸಬೇಕು. ಕ್ರೂಢೀಕರಿಸಿದ ಪ್ರಸ್ತಾವನೆಗಳನ್ನು ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳನ್ನಾಗಿ ಇಲಾಖಾವಾರು ವಿಂಗಡಿಸಬೇಕು ಎಂದು ಅವರು ಹೇಳಿದರು. ಗ್ರಾಮ ಪಂಚಾಯತಿಗಳು, ವಾರ್ಡ್ ಸಭೆಗಳ ಮೂಲಕ ಅಗತ್ಯ ಕಾಮಗಾರಿಗಳ ಪ್ರಸ್ತಾವನೆಯನ್ನು ನವೆಂಬರ್ 3 ರೊಳಗೆ ಅನುಮೋದನೆ ಪಡೆದು ತಾಲೂಕು ಪಂಚಾಯತ್‌ಗೆ ಸಲ್ಲಿಸಬೇಕು. ತಾಲೂಕಾ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯು ಸ್ವೀಕೃತ ಪ್ರಸ್ತಾವನೆಗಳನ್ನು ಕ್ರೂಢೀಕರಿಸಿ, ನವೆಂಬರ್ 7 ರೊಳಗೆ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಬೇಕು. ಬಳಿಕ ಜಿಲ್ಲಾ ಯೋಜನಾ ಸಮಿತಿಯು ಅನುಮೋದನೆ ಪಡೆದು, ನವೆಂಬರ್ 15 ರೊಳಗೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಕ್ರಮವಹಿಸಬೇಕು ಎಂದು ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಾಗಾರದಲ್ಲಿ ವೇದಿಕೆಯ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಅವರು ಸ್ವಾಗತಿಸಿ, ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರವನ್ನು ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಮಾರುತಿ ತಳವಾರ ಅವರು ವಂದಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *