
ಹುಬ್ಬಳ್ಳಿ/ಧಾರವಾಡ: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಸಹಭಾಗಿತ್ವದಲ್ಲಿ ಅಪಘಾತ ವಿಮಾ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು.
ಕಳೆದ ತಿಂಗಳು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರ ಕುಟುಂಬಕ್ಕೆ ಈ ಪರಿಹಾರ ಒದಗಿಸಲಾಗಿದೆ. ಮೃತ ಮಲ್ಲಿಕಾರ್ಜುನ ಅವರು ಅಂಚೆ ಕಚೇರಿಯಲ್ಲಿ ಕೇವಲ ೫೫೭ ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದರು. ಅವರ ಅಕಾಲಿಕ ಮರಣದ ನಂತರ, ಪಾಲಿಸಿಯ ನಾಮಿನಿಯಾಗಿದ್ದ ಪತ್ನಿ ಪವಿತ್ರಾ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರಿಗೆ ೧೦ ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು. ವಿಜಯನಗರ ಉಪ ಕಚೇರಿಯ ಅಂಚೆ ಮಹಿಳಾ ಸಿಬ್ಬಂದಿ ಸಿದ್ದಮ್ಮ ಹೆಬಸೂರ್ ಅವರು ಮೃತರಿಗೆ ಈ ವಿಮೆ ಮಾಡಿಸುವಲ್ಲಿ ನೆರವಾಗಿದ್ದರು.
ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಚಿಕ್ಕನರಗುಂದ, ಹುಬ್ಬಳ್ಳಿ ಹೆಡ್ ಪೋಸ್ಟ್ ಮಾಸ್ಟರ್ ಮಧು ಸಾಗರ್, ಹುಬ್ಬಳ್ಳಿ ಪೂರ್ವ ವಲಯದ ಉಪ ವಿಭಾಗದ ಮುಖ್ಯಸ್ಥ ವಿವೇಕ್ ನಿಂಬರಗಿ ಹಾಗೂ ಧಾರವಾಡ ಐಪಿಪಿಬಿ ಮ್ಯಾನೇಜರ್ ಶಿವಯೋಗಿ ಅವರು ಉಪಸ್ಥಿತರಿದ್ದು, ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.

