ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ: ಬಾಕಿ ಇರುವ ಮಾಹಿತಿ ಅಪ್‌ಡೇಟ್ ಮಾಡಲು ಜ. 31 ಕೊನೆಯ ದಿನ

Spread the love

ಧಾರವಾಡ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯ ಪಡೆಯಲು ತಾಂತ್ರಿಕ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಮಾಹಿತಿ ಅಪ್‌ಡೇಟ್ ಮಾಡಲು ಜನವರಿ 31 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ.

​2020-21 ರಿಂದ 2025-26ನೇ ಸಾಲಿನವರೆಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP) ಮೂಲಕ ಅರ್ಜಿ ಸಲ್ಲಿಸಿರುವ ಅನೇಕ ವಿದ್ಯಾರ್ಥಿಗಳಿಗೆ ಇನ್ನು ಸಹ ವಿದ್ಯಾರ್ಥಿವೇತನ ಪಾವತಿಯಾಗಿಲ್ಲ. ಇದಕ್ಕೆ ಪ್ರಮುಖವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡದಿರುವುದು, ಶೈಕ್ಷಣಿಕ ದತ್ತಾಂಶ ಹಾಗೂ ತಂತ್ರಾಂಶದಲ್ಲಿರುವ ಹೆಸರಿನಲ್ಲಿ ವ್ಯತ್ಯಾಸವಿರುವುದು, ಕೌನ್ಸಿಲಿಂಗ್ ಕೋರ್ಸ್‌ಗಳ ವಿದ್ಯಾರ್ಥಿಗಳು ಸರಿಯಾದ ಮಾಹಿತಿ ನೀಡದಿರುವುದು ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕಗಳ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಕಾರಣವಾಗಿದೆ ಎಂದು ಇಲಾಖೆ ತಿಳಿಸಿದೆ.

ತಿದ್ದುಪಡಿಗೆ ಲಾಗಿನ್ ಅವಕಾಶ:

ವಿದ್ಯಾರ್ಥಿಗಳು ಎದುರಿಸುತ್ತಿರುವ ಈ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವಿದ್ಯಾರ್ಥಿಗಳ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ತಾಲೂಕು ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಲಾಗಿನ್ ಮೂಲಕವೂ ಮಾಹಿತಿ ಅಪ್‌ಡೇಟ್ ಮಾಡಬಹುದಾಗಿದೆ.

​ವಿದ್ಯಾರ್ಥಿಗಳು ಈ ಕೂಡಲೇ ತಮ್ಮ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸರಿಪಡಿಸಿಕೊಳ್ಳಬೇಕು. ಜನವರಿ 31, 2026ರ ಒಳಗಾಗಿ ಮಾಹಿತಿ ಅಪ್‌ಡೇಟ್ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *