
ಧಾರವಾಡ, ನ. 24: ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆ ಇದೆ. ನಮ್ಮ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಗಳಿಗೆ ಇದೆ ಎಂದು ಬೆಳಗಾವಿಯ ಚಿಂತಕ ರಮೇಶ ಜಂಗಲ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು (ಕವಿವ ಸಂಘ) ಆಯೋಜಿಸಿರುವ ಹತ್ತು ದಿನಗಳ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ‘ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗುವ ಎಂಟು ದಶಕಗಳ ಹಿಂದೆಯೇ ಕನ್ನಡ ಕಟ್ಟುವ ಕಾರ್ಯವನ್ನು ಈ ಸಂಘವು ಆರಂಭಿಸಿರುವುದು ಅಭಿನಂದನೀಯ. ಬೆಳಗಾವಿಯ ಕೆಲ ಹವ್ಯಾಸಿ ರಂಗಕರ್ಮಿಗಳು ಸ್ಥಾಪಿಸಿದ ‘ರಂಗ ಸೃಷ್ಟಿ’ ಸಂಸ್ಥೆ ಗಡಿನಾಡಲ್ಲಿ ಕನ್ನಡ ನಾಟಕ ಪ್ರದರ್ಶನ ಮಾಡುತ್ತಾ ಬಂದಿದೆ. ಪ್ರಸ್ತುತ ಪ್ರದರ್ಶಿಸಿದ ಹೇಮರೆಡ್ಡಿ ಮಲ್ಲಮ್ಮ ನಾಟಕವು ನಲವಡಿ ಶ್ರೀಕಂಠಶಾಸ್ತ್ರಿಗಳ ಮೂಲ ನಾಟಕದ ಸಾರವನ್ನು ಇಟ್ಟುಕೊಂಡು, ಈಗಿನ ಸಮಾಜಕ್ಕೆ ಹೊಂದಾಣಿಕೆಯಾಗುವಂತೆ ಹಾಗೂ ಏಣಗಿ ಬಾಳಪ್ಪನವರ ನಾಟಕದ ಕೆಲವು ಅಂಶಗಳನ್ನು ಸೇರ್ಪಡೆ ಮಾಡಿ ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದರು.

ರಂಗಕಲಾ ಸನ್ಮಾನ ಸ್ವೀಕರಿಸಿದ ಬಸವರಾಜ ಗಾರ್ಗಿ ಮತ್ತು ಯಲ್ಲಪ್ಪಗೌಡ ಪಾಟೀಲ ಅವರು ಮಾತನಾಡಿ, ಕವಿವ ಸಂಘದಿಂದ ಈ ಸನ್ಮಾನ ಸ್ವೀಕರಿಸಲು ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಾಂಡುರಂಗ ಪಾಟೀಲ ಅವರು ಮಾತನಾಡಿ, ರಂಗಭೂಮಿ ನಶಿಸಿ ಹೋಗಬಾರದೆಂದು ಕವಿವ ಸಂಘವು ರಂಗ ಕಲೆ ಜೀವಂತವಿರಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ. ಮಲ್ಲಮ್ಮನ ಜೀವನದ ಯಶೋಗಾಥೆ ನೋಡುಗರಲ್ಲಿ ಆಸಕ್ತಿ ಹುಟ್ಟಿಸಿ, ಅಂತಹ ಮಹಾಸಾದ್ವಿಯ ಬಗ್ಗೆ ಗೌರವ ಇಮ್ಮಡಿಯಾಗುವಂತೆ ಮಾಡುತ್ತದೆ ಎಂದು ಹೇಳಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ನಾಟಕ ರಚನೆಕಾರರಾದ ರಾಮಕೃಷ್ಣ ಮರಾಠೆ ಮತ್ತು ನಿರ್ದೇಶಿಸಿದ ಶಿರೀಷ ಜೋಶಿ ಅವರು ನಾಟಕದ ಕುರಿತು ಮಾತನಾಡಿದರು. ಶಂಕರ ಹಲಗತ್ತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಅವರು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜಗೋಳ, ಡಾ. ಜಿನದತ್ತ ಹಡಗಲಿ, ಕೆ.ಎಚ್. ನಾಯಕ, ಎಂ.ಎ. ಚಿಕ್ಕಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

