​ಮೆಕ್ಕೆಜೋಳ ಬೆಳೆಗಾರರಿಗೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

Spread the love

ಧಾರವಾಡ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬೆಳೆಗಾರರ ಹಿತರಕ್ಷಣೆಗಾಗಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲೆಗೆ ಗರಿಷ್ಠ 1.85 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳದ ಪ್ರಮಾಣವನ್ನು ನಿಗದಿಪಡಿಸಲಾಗಿದ್ದು, ನಿಯಂತ್ರಿತ ಮಾರುಕಟ್ಟೆಗಳಲ್ಲಿನ ವಹಿವಾಟಿನ ಆಧಾರದ ಮೇಲೆ ರೈತರಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

​ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಸರಾಸರಿ ಧಾರಣೆ ಪ್ರತಿ ಕ್ವಿಂಟಾಲ್‌ಗೆ 1,900 ರೂಪಾಯಿ ಇರುವುದನ್ನು ಗಮನಿಸಿರುವ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ದರವನ್ನು (MIP) ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 2,150 ರೂಪಾಯಿ ಎಂದು ನಿಗದಿಪಡಿಸಿದೆ. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ಎಕರೆಗೆ 12 ಕ್ವಿಂಟಾಲ್‌ನಂತೆ ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಾಲ್‌ವರೆಗೆ ಮಾತ್ರ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಅವಕಾಶ ನೀಡಲಾಗಿದೆ. ರೈತರ ಜಮೀನಿನ ವಿಸ್ತೀರ್ಣವನ್ನು ‘ಫ್ರೂಟ್ಸ್’ (FRUITS) ತಂತ್ರಾಂಶದ ದತ್ತಾಂಶದ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

​ಯೋಜನೆಯ ಲಾಭ ಪಡೆಯಲು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ತೆರೆಯಲಾಗುವ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವಿಧಾನದ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಮಾರುಕಟ್ಟೆಗೆ ಆವಕವಾಗುವ ಮೆಕ್ಕೆಜೋಳವನ್ನು ಗೇಟ್ ಎಂಟ್ರಿ ಮೂಲಕವೇ ನಿರ್ವಹಿಸಲಾಗುತ್ತದೆ. ಎಫ್.ಎ.ಕ್ಯೂ (FAQ) ಗುಣಮಟ್ಟವನ್ನು ದೃಢೀಕರಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಿಂದ ತಾಂತ್ರಿಕ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಗುಣಮಟ್ಟದ ಆಧಾರದ ಮೇಲೆ ವಹಿವಾಟು ನಡೆಯಲಿದೆ. ಯುಎಮ್‌ಪಿ (UMP) ತಂತ್ರಾಂಶದಲ್ಲಿ ಮೊದಲ ವಹಿವಾಟು ದಾಖಲಾದ ದಿನಾಂಕದಿಂದ ಕೇವಲ ಒಂದು ತಿಂಗಳ ಅವಧಿಯವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.

​ಅರ್ಹ ಫಲಾನುಭವಿಗಳ ಪಟ್ಟಿಯನ್ನು ಭೂಮಿ, ಯುಐಡಿಎಐ ಹಾಗೂ ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಿ ಅಂತಿಮಗೊಳಿಸಲಾಗುತ್ತದೆ. ತದನಂತರ ಬೆಲೆ ವ್ಯತ್ಯಾಸದ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಡಿಬಿಟಿ (DBT) ಮೂಲಕ ಜಮೆ ಮಾಡಲಾಗುತ್ತದೆ. ಈಗಾಗಲೇ ಎಥೆನಾಲ್ ಉತ್ಪಾದನೆ ಹಾಗೂ ಪಶು ಆಹಾರ ಘಟಕಗಳಿಗೆ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಯೋಜನೆಯಲ್ಲಿ ಯಾವುದೇ ದುರುಪಯೋಗವಾಗದಂತೆ ಜಿಲ್ಲಾಧಿಕಾರಿಗಳ ನೇತೃತ್ವದ ತಂಡವು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದ್ದು, ಪಾರದರ್ಶಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *