ಗುಡಗೇರಿಯಲ್ಲಿ ಫೆಬ್ರವರಿ 1 ರಿಂದ 6 ರವರೆಗೆ ಶ್ರೀ ಶಾಂತಿನಾಥ ತೀರ್ಥಂಕರ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ

Spread the love


ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರ ಜಿನ ಮಂದಿರದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗವು ಫೆಬ್ರವರಿ 1ರಿಂದ 6ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಈ ಪವಿತ್ರ ಮಹೋತ್ಸವದ ಪಾವನ ಸಾನ್ನಿಧ್ಯವನ್ನು ಪರಮ ಪೂಜ್ಯ ಅಭಿಲಕ್ಷ ಜ್ಞಾನಭಾಸ್ಕರ ಆಚಾರ್ಯ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ವಹಿಸಲಿದ್ದಾರೆ ಎಂದು ಶ್ರೀ 1008 ಭಗವಾನ್ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಆರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಕಲ್ಯಾಣಿಕ ಸಂಸ್ಕಾರಗಳು ಜರುಗಲಿವೆ. ಫೆಬ್ರವರಿ 1ರಂದು ಮುಂಜಾನೆ ಧ್ವಜಾರೋಹಣ ಸಂಸ್ಕಾರ ಹಾಗೂ ಗರ್ಭಕಲ್ಯಾಣ ಪೂರ್ವಾಧರ್ವದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಫೆಬ್ರವರಿ 2ರಂದು ಗರ್ಭಕಲ್ಯಾಣ ಉತ್ತರಾರ್ಧ, ಫೆಬ್ರವರಿ 3ರಂದು ಜನ್ಮಕಲ್ಯಾಣಿಕ ಹಾಗೂ ಮೌಂಜಿ ಬಂಧನ ಸಂಸ್ಕಾರಗಳು ನಡೆಯಲಿವೆ.

ಫೆಬ್ರವರಿ 4ರಂದು ರಾಜ್ಯಾಭಿಷೇಕ ಹಾಗೂ ದೀಕ್ಷಾ ಕಲ್ಯಾಣಿಕ, ಫೆಬ್ರವರಿ 5ರಂದು ಕೇವಲ ಜ್ಞಾನ ಕಲ್ಯಾಣ ಹಾಗೂ ಫೆಬ್ರವರಿ 6ರಂದು ನಿರ್ವಾಣ ಕಲ್ಯಾಣ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹೋತ್ಸವವು ಸಮಾರೋಪಗೊಳ್ಳಲಿದೆ.

ಈ ಸಮಾರಂಭದ ನೇತೃತ್ವವನ್ನು ಕೊಲ್ಲಾಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಸಿಂಹನಗದ್ದೆಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಕನಕಗಿರಿಯ ಶ್ರೀ ಭುವನಕೀರ್ತಿ ಸ್ವಾಮೀಜಿ, ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಭಟ್ಟಾರಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ನೂತನ ಸಭಾಭವನದ ಉದ್ಘಾಟನೆಯನ್ನು ಸಂಸದ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸಂತೋಷ ಲಾಡ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಎಂ.ಆರ್. ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಉಪಸ್ಥಿತರಿರಲಿದ್ದಾರೆ. ಜೈನ್ ಸಮಾಜದ ಮುಖಂಡರಾದ ತವನಪ್ಪ ಅಷ್ಟಗಿ, ಅಜಿತ್ ಪ್ರಸಾದ್ ಜೈನ್ ಸೇರಿದಂತೆ ಹಲವು ಗಣ್ಯರು ಹಾಗೂ ಮಾಜಿ ಶಾಸಕರು ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


Leave a Reply

Your email address will not be published. Required fields are marked *