ಸ್ವಚ್ಛತೆಯಿಂದ ಮಾತ್ರ ಸದೃಢ ಆರೋಗ್ಯ ಸಾಧ್ಯ: ಶಾಸಕ ಎನ್. ಎಚ್. ಕೋನರಡ್ಡಿ

Spread the love


ಅಣ್ಣಿಗೇರಿ: ಮಾನವನು ತನ್ನ ದೈನಂದಿನ ಜೀವನದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಹಮ್ಮಿಕೊಂಡಿದ್ದ ‘ಅಣ್ಣಿಗೇರಿ ಸ್ವಚ್ಛತಾ ಆಂದೋಲನ’ದ ಅಂಗವಾಗಿ ಹೊಸಪೇಟಿ ಓಣಿ, ಕುರಬಗೇರಿ ಓಣಿ, ಡಿ.ಎಸ್.ಎಸ್. ನಗರ ಹಾಗೂ ಬನಶಂಕರಿ ದೇವಸ್ಥಾನದ ರಸ್ತೆಗಳಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಣ್ಣಿಗೇರಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಶಾಸಕ ಕೋನರಡ್ಡಿ ಅವರು ತಿಳಿಸಿದರು. ಪುರಸಭೆಯ ಕಸದ ವಾಹನಗಳು ಮನೆ ಮನೆಗೆ ಬಂದಾಗ ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಇದರಿಂದ ನಗರದಲ್ಲಿ ಸ್ವಚ್ಛತೆಯ ಮಟ್ಟ ಹೆಚ್ಚುವುದರೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ರಸ್ತೆಗಳ ಮೇಲೆ ಕಸ ಎಸೆಯುವುದು, ನಿರುಪಯೋಗಿ ವಸ್ತುಗಳನ್ನು ಬಿಸಾಡುವುದು ಹಾಗೂ ಅತಿಕ್ರಮಣ ಮಾಡುವಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ತೊರೆಯಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬುದನ್ನು ಮನಗಂಡು ಸ್ವಚ್ಛತೆಯನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸೂಚನೆ ನೀಡಿದರು. ವಿಶೇಷವಾಗಿ ಹೊಸಪೇಟಿ ಓಣಿಯಲ್ಲಿ ಸೂರು ಇಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮನೆಗಳಿಗೆ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದುಕೊಂಡ ಅವರು, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ಶಾಶ್ವತ ಸೂರು ಕಲ್ಪಿಸಿಕೊಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಚೇರಮನ್ ಇಮಾಮ ದರವಾನ ಉಪಸ್ಥಿತರಿದ್ದರು. ಸದಸ್ಯರುಗಳಾದ ಈಶ್ವರ ಕಾಳಪ್ಪನವರ, ಎ.ಪಿ. ಗುರಿಕಾರ, ಸಿ.ಜಿ. ನಾವಳ್ಳಿ, ಹಸನಸಾಬ ಸುಂಕದ ಹಾಗೂ ವೀಣಾ ಭೋವಿ ಭಾಗವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಇಂಜಿನಿಯರ್ ಕೆ.ಎಸ್. ಪಾಟೀಲ, ಕಂದಾಯ ಅಧಿಕಾರಿ ರಿಷಿ ಸಾರಂಗಿ, ಹೆಚ್ಚುವರಿ ಠಾಣಾ ಅಧಿಕಾರಿ ವಿ.ಎಸ್. ಪಾಟೀಲ ಸೇರಿದಂತೆ ಅರ್ಜುನ ಕಲಾಲ್‌, ಮಹೇಶ ಅಂಗಡಿ, ನಾಗಪ್ಪ ದಳವಾಯಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಈ ಸ್ವಚ್ಛತಾ ಆಂದೋಲನವು ನಗರದಾದ್ಯಂತ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ವರದಿ: ಮಾಹಾತೇಂಶ ಹಕ್ಕರಕಿ


Leave a Reply

Your email address will not be published. Required fields are marked *