
ಧಾರವಾಡ/ಅಣ್ಣಿಗೇರಿ: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಲಾದ ಪ್ರಕರಣವೊಂದು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮಗನ ಸಾವು ಸಹಜವಾದುದಲ್ಲ, ಇದೊಂದು ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಹೂತಿದ್ದ ಶವವನ್ನು ಎರಡು ತಿಂಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರು (51) ಮೃತಪಟ್ಟವರು. ಪತ್ನಿ ವಹಿದಾಬಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಬಾಬಾಜಾನ್, ಕಳೆದ ನವೆಂಬರ್ 11 ರಂದು ಧಾರವಾಡದಲ್ಲಿ ನಿಧನರಾಗಿದ್ದರು. ಆ ವೇಳೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಬಳಿಕ ಕುಟುಂಬಸ್ಥರು ಮೃತದೇಹವನ್ನು ಸ್ವಗ್ರಾಮ ಭದ್ರಾಪುರಕ್ಕೆ ತಂದು ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆದರೆ, ದಿನ ಕಳೆದಂತೆ ಮಗನ ಸಾವಿನ ಬಗ್ಗೆ ಪೋಷಕರಿಗೆ ಅನುಮಾನ ಮೂಡಿದೆ. ತಮ್ಮ ಮಗನದ್ದು ಸಹಜ ಸಾವಲ್ಲ, ಸೊಸೆಯೇ ಯಾವುದೋ ದುರುದ್ದೇಶದಿಂದ ಹತ್ಯೆ ಮಾಡಿದ್ದಾಳೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ನಡೆಸದೆ ಅವಸರದಲ್ಲಿ ಶವಸಂಸ್ಕಾರ ಮಾಡಿರುವುದರ ಹಿಂದೆ ಬಲವಾದ ಸಂಶಯವಿದೆ ಎಂದು ಧಾರವಾಡ ಎಸ್ಪಿ ಅವರಿಗೆ ದೂರು ನೀಡಿದ್ದರು.
ದೂರಿನನ್ವಯ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸತ್ಯಾಸತ್ಯತೆ ಅರಿಯಲು ಶವ ಪರೀಕ್ಷೆಗೆ ನಿರ್ಧರಿಸಿದರು. ಅದರಂತೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾಪುರದ ಸ್ಮಶಾನಕ್ಕೆ ತೆರಳಿ, ಹೂಳಲಾಗಿದ್ದ ಬಾಬಾಜಾನ್ ಅವರ ಶವವನ್ನು ಹೊರತೆಗೆದರು. ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಲಿದೆ. ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಇದೀಗ ಮರುಜೀವ ಬಂದಂತಾಗಿದ್ದು, ಗ್ರಾಮದಲ್ಲಿ ಸಂಚಲನ ಮೂಡಿಸಿದೆ.

