
ಧಾರವಾಡ: ಜಿಲ್ಲೆಯಲ್ಲಿ ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಕಾರ್ಯ ನಡೆಯುತ್ತಿಲ್ಲ. ಹೀಗಾಗಿ, ಮತದಾರರ ಪಟ್ಟಿಯಿಂದ ಯಾವುದೇ ಹೆಸರುಗಳನ್ನು ತೆಗೆದುಹಾಕುವ ಅಥವಾ ಹೊಸದಾಗಿ ಸೇರ್ಪಡೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಭಾನುವಾರ (ಜ.12) ಸಂಜೆ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಮುಂಬರುವ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವ ಸಿದ್ಧತೆಯ ಭಾಗವಾಗಿ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿಗೆ ತಾಳೆ ನೋಡುವ (Mapping) ಕಾರ್ಯವನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಇದರಲ್ಲಿ 40 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರು ಮತ್ತು ಅವರ ಕುಟುಂಬ ಸದಸ್ಯರ (Progeny) ಮಾಹಿತಿಯನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಶೇ. 63.76 ರಷ್ಟು ಪ್ರಗತಿ:
ಜಿಲ್ಲೆಯಲ್ಲಿ ಪ್ರಸ್ತುತ ಮತದಾರರ ಮ್ಯಾಪಿಂಗ್ ಕಾರ್ಯ ಒಟ್ಟಾರೆಯಾಗಿ ಶೇ. 63.76 ರಷ್ಟು ಪೂರ್ಣಗೊಂಡಿದೆ. ಇದರಲ್ಲಿ ಮ್ಯಾಪಿಂಗ್ (Mapping) ಕಾರ್ಯ ಶೇ. 59.59 ರಷ್ಟು ಹಾಗೂ ಕುಟುಂಬ ಸದಸ್ಯರ (Progeny) ತಾಳೆ ಕಾರ್ಯ ಶೇ. 69.10 ರಷ್ಟು ಸಾಧನೆಯಾಗಿದೆ. ಬಾಕಿ ಉಳಿದ ಪ್ರಗತಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರವಾರು ಮ್ಯಾಪಿಂಗ್ ಪ್ರಗತಿ ವಿವರ (ಒಟ್ಟಾರೆ ಸಾಧನೆ):
- ಕುಂದಗೋಳ: ಶೇ. 81.52 (ಅತ್ಯುತ್ತಮ ಸಾಧನೆ)
- ನವಲಗುಂದ: ಶೇ. 78.54
- ಕಲಘಟಗಿ: ಶೇ. 78.36
- ಧಾರವಾಡ: ಶೇ. 69.09
- ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಶೇ. 50.85
- ಹುಬ್ಬಳ್ಳಿ-ಧಾರವಾಡ ಕೇಂದ್ರ: ಶೇ. 49.42
- ಹುಬ್ಬಳ್ಳಿ-ಧಾರವಾಡ ಪೂರ್ವ: ಶೇ. 49.32
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕಾರ್ಯವನ್ನು ಚುರುಕುಗೊಳಿಸಲು ಸೂಚಿಸಿದರು. ಈ ಕಾರ್ಯದಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು ಮತ್ತು ಮತಗಟ್ಟೆ ಅಧಿಕಾರಿಗಳಿಗೆ (BLO) ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಸಿಪಿ ಮಹಾನಿಂಗ ನಂದಗಾವಿ, ವಿಶೇಷ ಭೂಸ್ವಾಧೀನಾಧಿಕಾರಿ ಕವಿತಾ ಯೋಗಪ್ಪನವರ ಹಾಗೂ ಜಿಲ್ಲೆಯ ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.

