
ನವಲಗುಂದ: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಕಾಮಗಾರಿ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು. ಪಟ್ಟಣದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಸದರ ಕ್ರೀಡಾ ಮಹೋತ್ಸವಕ್ಕೆ ಆಗಮಿಸಿದ್ದ ವೇಳೆ ರೈತಭವನಕ್ಕೆ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು. ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಪರಿಸರ ಇಲಾಖೆಯ ಅನುಮತಿ ಮತ್ತು ಗೆಜೆಟ್ ನೋಟಿಫಿಕೇಶನ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ಗಿಡಗಳನ್ನು ತೆರವುಗೊಳಿಸಿದಾಗ ಪರ್ಯಾಯವಾಗಿ ಗಿಡ ನೆಡುವ ಮತ್ತು 71 ಎಕರೆ ಅರಣ್ಯ ಭೂಮಿಯ ಹಸ್ತಾಂತರದ ಕುರಿತು ಕೆಲವೊಂದು ಸ್ಪಷ್ಟನೆಗಳ ಅಗತ್ಯವಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧಿತ ಸಚಿವರು ದೆಹಲಿಗೆ ಬರಲಿದ್ದು, ಅದಕ್ಕೂ ಮುನ್ನ ವಕೀಲರ ಸಭೆ ಕರೆದು ನ್ಯಾಯಾಲಯದಲ್ಲಿರುವ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಬೆಳೆ ಸಾಲದ ವಿಚಾರವಾಗಿ ಮಾತನಾಡಿದ ಸಚಿವರು, ರೈತರ ಸಿಬಿಲ್ ಸ್ಕೋರ್ ಪರಿಶೀಲಿಸದಂತೆ ಈಗಾಗಲೇ ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾವುದೇ ಬ್ಯಾಂಕ್ ಸಿಬಿಲ್ ಸ್ಕೋರ್ ನೆಪವೊಡ್ಡಿ ರೈತರಿಗೆ ಬೆಳೆಸಾಲ ತಿರಸ್ಕರಿಸಿದರೆ, ಅಂತಹ ಬ್ಯಾಂಕ್ ವಿವರವನ್ನು ತಮ್ಮ ಕಚೇರಿಗೆ ಕಳುಹಿಸಿ ಅಥವಾ ಖುದ್ದಾಗಿ ಬಂದು ದೂರು ನೀಡಬಹುದು. ಅಂತಹ ಬ್ಯಾಂಕ್ ವ್ಯವಸ್ಥಾಪಕರನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೆ, ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ವಾಪಸಾತಿ ಕುರಿತು ಗಮನಕ್ಕೆ ಬಂದ ತಕ್ಷಣವೇ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸುವಾಗ ರೈತ ಮುಖಂಡ ಸುಭಾಸ ಚಂದ್ರಗೌಡ ಪಾಟೀಲ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹಾಗೂ ರೈತರ ಉಳಿವಿಗಾಗಿ ನಿಮ್ಮ ನಿಲುವು ಏನೆಂದು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಹೇಡಿ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ರೈತರ ಧಿಕ್ಕಾರ ಮತ್ತು ಶಾಪ ತಟ್ಟದೇ ಇರದು ಎಂದು ಕಿಡಿಕಾರಿದರು. ಸುಮಾರು 2100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೀರಾವರಿ ಕಾಲುವೆ ಕಾಮಗಾರಿಗಳು ಕಳಪೆಯಾಗಿವೆ. ಮಹದಾಯಿ ಬಗ್ಗೆ ಸರ್ವಪಕ್ಷ ಸಭೆ ಕರೆದು ನಿಯೋಗ ಕೊಂಡೊಯ್ಯಲು ತಿಳಿಸಿದರೂ ನಕಾರಾತ್ಮಕ ಧೋರಣೆ ಅನುಸರಿಸಲಾಗುತ್ತಿದೆ. ಅನೇಕ ರೈತರು ಹೋರಾಟದ ವೇಳೆ ಮರಣ ಹೊಂದಿದ್ದಾರೆ, ಇನ್ನು ಕೆಲವರು ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಹೆಸರು ಮತ್ತು ಗೋವಿನಜೋಳ ಖರೀದಿ, ಬೆಳೆಹಾನಿ ಪರಿಹಾರ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನೀವು ರೈತರಿಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ, ರೈತ ಹೋರಾಟಗಾರರು ಹಾಗೂ ಕೇಂದ್ರ ಸಚಿವರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು. ಸಮಸ್ಯೆ ಬಗೆಹರಿಸಲು ನಿರ್ದಿಷ್ಟ ಕಾಲಮಿತಿ ನೀಡುವಂತೆ ರೈತರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ದಾಡಿಭಾವಿ, ಶಿವಣ್ಣ ಹುಬ್ಬಳ್ಳಿ, ರವಿ ತೋಟದ, ಇಮಾಮ ಚಾಹುಸೇನ, ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ದೇವರಾಜ ದಾಡಿಭಾವಿ, ಷಣ್ಮುಖ ಗುರಿಕಾರ, ಸಾಯಿಬಾಬಾ ಆನೆಂಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

