ಧಾರವಾಡ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸಾರ್ವಜನಿಕರಿಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಇಂಧನ ಅಭಾವವಿಲ್ಲ ಹಾಗೂ ಸಾರ್ವಜನಿಕರು ಸುಳ್ಳು ಸುದ್ದಿಗೆ ಕಿವಿಗೊಟ್ಟು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಸುಳ್ಳು ಸುದ್ದಿಯಿಂದಾಗಿ ಸಾರ್ವಜನಿಕರು ಗಾಬರಿಗೊಂಡು ಪೆಟ್ರೋಲ್ ಬಂಕ್ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಈ ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾಧಿಕಾರಿಗಳು ಜಿಲ್ಲೆಯ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜಿಲ್ಲೆಯಾದ್ಯಂತ ಇರುವ ಎಲ್ಲಾ ತೈಲ ಕಂಪನಿಗಳ ಬಳಿ ಮತ್ತು ವಿವಿಧ ಪೆಟ್ರೋಲ್ ಬಂಕ್ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದೆ. ಅಲ್ಲದೆ, ಎಲ್ಲಾ ಬಂಕ್ಗಳಿಗೆ ನಿರಂತರವಾಗಿ ಇಂಧನ ಪೂರೈಕೆ ಮಾಡಲು ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಪೂರೈಕೆಯ ಸರಪಳಿಯಲ್ಲಿ ಯಾವುದೇ ಅಡೆತಡೆಗಳು ಉಂಟಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಗಾಬರಿಯಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವ (Panic Buying) ಪ್ರಯತ್ನಕ್ಕೆ ಜನರು ಮುಂದಾಗಬಾರದು ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿಗಳು, ಈ ರೀತಿಯ ಅನಗತ್ಯ ಸಂಗ್ರಹಣೆಯಿಂದ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ. ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಇದೇ ವೇಳೆ ವದಂತಿಗಳನ್ನು ಹಬ್ಬಿಸುವವರ ವಿರುದ್ಧವೂ ಜಿಲ್ಲಾಧಿಕಾರಿಗಳು ಕಠಿಣ ಸಂದೇಶ ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ಇಂಧನ ಅಭಾವದ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಆಧಾರರಹಿತ ವದಂತಿಗಳಿಗೆ ಮರುಳಾಗದೆ ಎಂದಿನಂತೆ ವ್ಯವಹಾರ ನಡೆಸುವಂತೆ ಅವರು ಭರವಸೆ ನೀಡಿದ್ದಾರೆ.

