
ಧಾರವಾಡ ನ. 07: ಧಾರವಾಡ ಜಿಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನಿರ್ಮಿಸಲಾದ ನೂತನ ನಗರ ಸಾರಿಗೆ ಬಸ್ ನಿಲ್ದಾಣವನ್ನು ಇಂದು (ನ. 07) ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜಂಟಿಯಾಗಿ ಉದ್ಘಾಟಿಸಿದರು. ಈ ನೂತನ ನಿಲ್ದಾಣದಿಂದ ಧಾರವಾಡ ನಗರದ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಚುರುಕು ಸಿಗಲಿದೆ.
ಈ ಯೋಜನೆಯು ಒಟ್ಟು ₹1311.00 ಲಕ್ಷಗಳ ಮೊತ್ತದಲ್ಲಿ ನಿರ್ಮಾಣಗೊಂಡಿದ್ದು, ಮಳೆಗಾಲ ಹೊರತುಪಡಿಸಿ ಕೇವಲ 12 ತಿಂಗಳ ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ನೂತನ ನಿಲ್ದಾಣವು ಒಟ್ಟು 26.00 ಗುಂಟೆ 44 ಅಣೆ (2806.06 ಚ.ಮೀ) ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು, ಕಟ್ಟಡದ ನೆಲಮಹಡಿ, ಮೆಜನೈನ್ ಮಹಡಿ, ಮೊದಲನೇ ಮಹಡಿ ಮತ್ತು ಟೆರೇಸ್ ಮಹಡಿಗಳನ್ನು ಒಳಗೊಂಡಂತೆ ಒಟ್ಟು 4037.97 ಚ.ಮೀ ವಿಸ್ತೀರ್ಣದಲ್ಲಿ ನಿಲ್ದಾಣವು ತಲೆ ಎತ್ತಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ (ಆರ್.ಓ ಪ್ಲಾಂಟ್), ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು ಸೇರಿವೆ. ಜೊತೆಗೆ, ಮುಖ್ಯ ಕಟ್ಟಡದ ನೆಲಹಾಸಿಗೆ ಗ್ರಾನೈಟ್ ಬಳಸಲಾಗಿದ್ದು, ವಿಶೇಷ ಚೇತನರಿಗೆ ರ್ಯಾಂಪ್ ವ್ಯವಸ್ಥೆ ಹಾಗೂ ಲಿಫ್ಟ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ನಿಲ್ದಾಣದಲ್ಲಿ ಬಸ್ಗಳ ನಿಲುಗಡೆಗೆ 4 ಅಂಕಣಗಳನ್ನು ನಿರ್ಮಿಸಲಾಗಿದ್ದು, ಸಂಚಾರ ನಿಯಂತ್ರಣಾ ಕೊಠಡಿ ಹಾಗೂ ಮೊದಲನೇ ಮಹಡಿಯಲ್ಲಿ ಕಛೇರಿ ಉಪಯೋಗಕ್ಕಾಗಿ ಕೊಠಡಿಗಳನ್ನು ಸಹ ಕಲ್ಪಿಸಲಾಗಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಮತ್ತು ಎಫ್.ಹೆಚ್. ಜಕ್ಕಪ್ಪನವರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾಪೌರರಾದ ಜ್ಯೋತಿ ಪಾಟೀಲ ಹಾಗೂ ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

