ಹೆಚ್ಚುವರಿ ಶಿಕ್ಷಕರ ನಿಯೋಜನೆಯಲ್ಲಿ ಕರ್ತವ್ಯಲೋಪ: ನವಲಗುಂದ ಬಿಇಒ, ಡಿಡಿಪಿಐ ವಿರುದ್ಧ ಲೋಕಾಯುಕ್ತಕ್ಕೆ ದೂರು

Spread the love

ನವಲಗುಂದ: ಹೆಚ್ಚುವರಿ ಶಿಕ್ಷಕರು ತಾವೇ ಆಯ್ಕೆ ಮಾಡಿಕೊಂಡ ಶಾಲೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ನವಲಗುಂದದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್.ಎಸ್. ಕೆಳದಿಮಠ ಅವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ತಿಳಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2025ನೇ ಸಾಲಿನ ಸೆಪ್ಟೆಂಬರ್ 9 ರಂದು ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯೋಜನೆಗಾಗಿ ಕೌನ್ಸೆಲಿಂಗ್ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಒಟ್ಟು 35 ಶಿಕ್ಷಕರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇವರಲ್ಲಿ 21 ಶಿಕ್ಷಕರು ಮಾತ್ರ ನಿಗದಿತ ಶಾಲೆಗಳಿಗೆ ಹಾಜರಾಗಿ ವರದಿ ಮಾಡಿಕೊಂಡಿದ್ದಾರೆ. ಆದರೆ, ಇನ್ನುಳಿದ 14 ಶಿಕ್ಷಕರು ಕೌನ್ಸೆಲಿಂಗ್ ನಡೆದು ಮೂರು ತಿಂಗಳು ಕಳೆದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಇದೀಗ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣದ ಸಂಖ್ಯೆ: ಕಂಪ್ಲೇಂಟ್/ಉಪಲೋಕ್/ಬಿಜಿಎಮ್/199/2026 ಎಂದು ದಾಖಲಾಗಿದೆ.

​ಶಿಕ್ಷಕರು ತಾವೇ ಆಯ್ಕೆ ಮಾಡಿಕೊಂಡ ಶಾಲೆಗಳಿಗೆ ಹಾಜರಾಗದಿದ್ದರೂ, ಅವರನ್ನು ಕರ್ತವ್ಯಕ್ಕೆ ಹಾಜರುಪಡಿಸಿ ವರದಿ ಪಡೆದುಕೊಳ್ಳಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅವರು ಕರ್ತವ್ಯಲೋಪ ಎಸಗಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಭಾಗದ ಕಡಿಮೆ ಶಿಕ್ಷಕರಿರುವ ಶಾಲೆಗಳಲ್ಲಿ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಹಾಗೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸತ್ಯ, ನ್ಯಾಯ ಮತ್ತು ನೀತಿಯ ಪಾಠ ಹೇಳಬೇಕಾದ ಶಿಕ್ಷಕರೇ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ಇದನ್ನು ಸರಿಪಡಿಸಬೇಕಾದ ಮೇಲಾಧಿಕಾರಿಗಳು ಮೌನ ವಹಿಸಿರುವುದು ದುರದೃಷ್ಟಕರ. ಸದ್ಯ ಹೆಚ್ಚುವರಿ ಶಿಕ್ಷಕರ ಬೇಜವಾಬ್ದಾರಿಯ ಪ್ರಕರಣ ಲೋಕಾಯುಕ್ತದ ಅಂಗಳ ತಲುಪಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗುವ ವಿಶ್ವಾಸವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *