
ಧಾರವಾಡ: ಇಂದಿನ ವೇಗದ ಬದುಕಿನಲ್ಲಿ ಕುಟುಂಬ ವ್ಯವಸ್ಥೆಯು ಸುಭದ್ರವಾಗಿರಬೇಕಾದರೆ ಪಾಲಕರು ಮತ್ತು ಮಕ್ಕಳ ನಡುವೆ ಪರಸ್ಪರ ವಿಶ್ವಾಸ ಹಾಗೂ ಸಮನ್ವಯದ ಅಗತ್ಯವಿದೆ ಎಂದು ಹಿರಿಯ ಸುಭೋದ ಸಮಾಲೋಚಕರಾದ ಡಾ. ಗುರುರಾಜ ಪಾಟೀಲರು ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪದ ವತಿಯಿಂದ ಆಯೋಜಿಸಲಾಗಿದ್ದ ‘ಕುಟುಂಬ ವ್ಯವಸ್ಥೆಯಲ್ಲಿ ಪಾಲಕರ ಮತ್ತು ಮಕ್ಕಳ ಆಕ್ಷೇಪಗಳು ಹಾಗೂ ಅಪೇಕ್ಷೆಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕುಟುಂಬದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ ಅವರನ್ನು ಸ್ನೇಹಿತರಂತೆ ಕಾಣಬೇಕು. ಮಕ್ಕಳು ಅರಿವಿಲ್ಲದೆಯೇ ಪಾಲಕರನ್ನು ಅನುಕರಿಸುವುದರಿಂದ, ಹಿರಿಯರು ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬೇಕು ಹಾಗೂ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಬೇಕು ಎಂದು ಅವರು ಸಲಹೆ ನೀಡಿದರು.
ಈ ವಿಶಿಷ್ಟ ಸಂವಾದದಲ್ಲಿ ವಿವಿಧ ಶಾಲೆ ಹಾಗೂ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಪಾಲಕರು ನಮ್ಮನ್ನು ಇತರರೊಂದಿಗೆ ಹೋಲಿಸಬಾರದು, ಸಣ್ಣ ಪುಟ್ಟ ವಿಚಾರಗಳಿಗೆ ಬೈಯಬಾರದು ಮತ್ತು ನಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸ್ವಾತಂತ್ರ್ಯ ನೀಡಬೇಕು ಎಂಬ ಅಪೇಕ್ಷೆಗಳನ್ನು ವಿದ್ಯಾರ್ಥಿಗಳು ಮಂಡಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪಾಲಕರ ಪ್ರತಿನಿಧಿಗಳು, ಇಂದಿನ ಮಕ್ಕಳು ಮೊಬೈಲ್ ಚಟಕ್ಕೆ ಬಿದ್ದು ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ ಮತ್ತು ಹಿರಿಯರ ಮಾತನ್ನು ಕೇಳುತ್ತಿಲ್ಲ ಎಂಬ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಮಕ್ಕಳು ತಂದೆ-ತಾಯಿಗಳ ಅನುಭವವನ್ನು ಸದುಪಯೋಗಪಡಿಸಿಕೊಂಡು ಗೌರವದಿಂದ ನಡೆದುಕೊಳ್ಳಬೇಕು ಎಂಬ ಆಶಯವನ್ನು ಶ್ರೀಮತಿ ವ್ಹಿ.ಎನ್. ಕೀರ್ತಿವತಿ, ನೀಲಕ್ಕ ಚಂದು ಸೇರಿದಂತೆ ಹಲವು ಗಣ್ಯರು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಮಂಟಪದ ಸಂಚಾಲಕರಾದ ಡಾ. ಶೈಲಜಾ ಅಮರಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಡಾ. ಅರುಣಾ ಹಳ್ಳಿಕೇರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿ. ಶಾರದಾ ಮತ್ತು ಶಶಿಕಲಾ ಶಾಸ್ತ್ರಿಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಸಂವಾದದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವೇದಿಕೆಯ ಮೇಲೆ ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಎಂ.ಎಂ. ಚಿಕ್ಕಮಠ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

