
ನವಲಗುಂದ: ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣ ಮತ್ತು ಕೃಷಿ ಅಭಿವೃದ್ಧಿಗೆ ದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾನ್ ಚೇತನ ಶ್ರೀ ಲಿಂಗರಾಜ ಸರದೇಶಾಯಿಯವರು ಸದಾಕಾಲ ಸ್ಮರಣೀಯ ಹಾಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಅವರ ವಂಶಸ್ಥರಾದ ಲಿಂಗರಾಜ ಸರದೇಶಾಯಿ ಅವರು ಹೇಳಿದರು.
ನಗರದ ಥಡಿಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ಲಿಂಗರಾಜ ಸರದೇಶಾಯಿ ಅವರ 165ನೇ ಜನ್ಮದಿನಾಚರಣೆ ಅಂಗವಾಗಿ ಲಿಂಗರಾಜರ ಗದ್ದುಗೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 19ನೇ ಶತಮಾನದಲ್ಲೇ ಸಮಾಜವನ್ನು ಎಚ್ಚರಿಸಿ ಶಿಕ್ಷಣದ ಜ್ಯೋತಿ ಬೆಳಗಿದ ಮಹಾದಾನಿಯ ಸೇವೆಯ ಫಲವಾಗಿ ಇಂದು ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಅನ್ನದಾಸೋಹ ಕೇಂದ್ರಗಳು ಜ್ಞಾನ ದಾಸೋಹದ ಪರಂಪರೆಯನ್ನು ಮುಂದುವರಿಸುತ್ತಿವೆ. ಜನಕಲ್ಯಾಣಕ್ಕಾಗಿ ಕೆರೆ-ಕಟ್ಟೆಗಳು ಮತ್ತು ಕಾಲುವೆಗಳನ್ನು ನಿರ್ಮಿಸಿ ವೈಜ್ಞಾನಿಕ ಕೃಷಿಗೆ ದಿಕ್ಕು ತೋರಿದ ಅವರು ನಿಜವಾದ ಅರ್ಥದ ಜಲತಜ್ಞರಾಗಿದ್ದರು. ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಸಾನ್ನಿಧ್ಯದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸಿ, ಮೊದಲ ಎರಡು ಅವಧಿಗೆ ಅಧ್ಯಕ್ಷರಾಗಿ ಸಮಾಜದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ದೇಣಿಗೆ ನೀಡಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಎನ್. ಎಚ್. ಕೋನರಡ್ಡಿ ಅವರು ಲಿಂಗರಾಜ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭಾವಚಿತ್ರವಿರುವ ಎತ್ತಿನ ಬಂಡಿಗಳ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಗವಿಮಠದ ಬಸವಲಿಂಗ ಶ್ರೀಗಳು ವಹಿಸಿದ್ದರು.
ವೇದಿಕೆಯ ಮೇಲೆ ತಹಶೀಲ್ದಾರ್ ಸುಧೀರ್ ಸಾವುಕಾರ, ತಾಲೂಕು ಕುಡವಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಪ್ರಮುಖರಾದ ಬಸವರಾಜ ಹರಿವಾಳ, ನಾಗಪ್ಪ ಸಂಗಟಿ, ರಾಯನಗೌಡ ಪಾಟೀಲ, ಲಕ್ಷ್ಮಣ ಜವಳಗಿ, ಲಕ್ಷ್ಮಣ ಹಳ್ಳದ, ಬಸವರಾಜ ಸೋಮಗೊಂಡ, ಶಂಕರಗೌಡ ಪಾಟೀಲ ಸೇರಿದಂತೆ ಕುಡವಕ್ಕಲಿಗ ಸಮಾಜದ ಗಣ್ಯರು, ಲಿಂಗರಾಜ ಜಯಂತಿ ಉತ್ಸವ ಯುವ ಸಮಿತಿಯ ಸರ್ವ ಸದಸ್ಯರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

