ನವಲಗುಂದ: ಸಂಸದರ ಕ್ರೀಡಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ; ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಸಚಿವ ಪ್ರಲ್ಹಾದ ಜೋಶಿ

Spread the love

ನವಲಗುಂದ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಮ್ಮಿಕೊಂಡಿರುವ ‘ಸಂಸದರ ಕ್ರೀಡಾ ಮಹೋತ್ಸವ’ಕ್ಕೆ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ. ಸಿ. ಪಾಟೀಲ ಅವರು, ಗ್ರಾಮೀಣ ಕ್ರೀಡಾಪಟುಗಳು ಈ ಸದವಕಾಶವನ್ನು ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಶುಭ ಹಾರೈಸಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಮಹೋತ್ಸವವು ಯುವಜನತೆಯಲ್ಲಿ ಕ್ರೀಡಾ ಜಾಗೃತಿ ಮೂಡಿಸಲು ಪ್ರಮುಖ ಪಾತ್ರ ವಹಿಸಿದೆ ಎಂದರು. ಮತ್ತೊಬ್ಬ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರು ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ, ಸೋಲೇ ಗೆಲುವಿನ ಸೋಪಾನವಾಗಲಿ ಎಂದು ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿದರು.

​ಸಂಜೆ ವೇಳೆಗೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಆಗಮಿಸಿ, ಖೋ-ಖೋ, ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಗಳಿಗೆ ನಾಣ್ಯ ಚಿಮ್ಮುವ ಮೂಲಕ ಅಧಿಕೃತ ಚಾಲನೆ ನೀಡಿದರು. ಬಳಿಕ ಉದ್ದ ಜಿಗಿತ, ಎತ್ತರ ಜಿಗಿತ, 100 ಮತ್ತು 800 ಮೀಟರ್ ಓಟದ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

​ಈ ಸಂದರ್ಭದಲ್ಲಿ ಡಾ.ಆರ್.ಬಿ.ಶಿರಿಯಣ್ಣವರ, ತಹಸೀಲ್ದಾರ್ ಸುಧೀರ್ ಸಾಹುಕಾರ, ಮುಖಂಡರಾದ ಬಿ.ಬಿ. ಗಂಗಾಧರಮಠ, ಚಂದ್ರಶೇಖರ ದಾಡಿಬಾವಿ, ನಿಂಗಪ್ಪ ಸುತಗಟ್ಟಿ, ಸಿದ್ದನಗೌಡ ಪಾಟೀಲ್, ಅಶೋಕ ಮಜ್ಜಿಗುಡ್ಡ, ಚೈತ್ರಾ ಶಿರೂರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಗಂಗಪ್ಪ ಮನಮಿ ಸ್ವಾಗತಿಸಿದರೆ, ಷಣ್ಮುಖ ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್. ವಿ. ಕುರುವತ್ತಿಮಠ ಕ್ರೀಡಾ ಪ್ರತಿಜ್ಞೆ ಬೋಧಿಸಿದರು ಮತ್ತು ಮಲ್ಲಿಕಾರ್ಜುನಗೌಡ ಸಂಗನಗೌಡರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *