ಬಾಡ ಗ್ರಾಮದಲ್ಲಿ ಫೆ. 16 ರಿಂದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ: ವಿವಿಧ ಪವಾಡಗಳ ಸಡಗರ

Spread the love

ಧಾರವಾಡ: ತಾಲೂಕಿನ ಸುಕ್ಷೇತ್ರ ಬಾಡ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ 23ನೇ ವರ್ಷದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವ್ಯ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 16 ಮತ್ತು 17 ರಂದು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಜರುಗುವ ಈ ಧಾರ್ಮಿಕ ಉತ್ಸವದಲ್ಲಿ ಅಪಾರ ಭಕ್ತ ಮಂಡಳಿಯ ಸಮ್ಮುಖದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ.

​ಜಾತ್ರೆಯ ಮೊದಲ ದಿನವಾದ ಫೆಬ್ರವರಿ 16ರ ಸೋಮವಾರದಂದು ಜ್ಯೋತಿ ಬೆಳಗಿಸುವುದು, ಧ್ವಜಾರೋಹಣ ಹಾಗೂ ತ್ರಿಸೂಲಿ ಪೂಜೆ ಜರುಗಲಿದೆ. ಅಂದು ರಾತ್ರಿ 10:35 ರಿಂದ ವಿವಿಧ ಗ್ರಾಮಗಳ ಭಜನಾ ಮೇಳದವರಿಂದ ಜಾಗರಣೆ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನವಾದ ಫೆಬ್ರವರಿ 17ರ ಮಂಗಳವಾರ ಮುಂಜಾನೆ 4 ಗಂಟೆಗೆ ಕಾಕಡಾರತಿ ನಡೆಯಲಿದ್ದು, ನಂತರ ಶ್ರೀ ಸ್ವಾಮಿಯ ಮಣಿಮಲ್ಲಾಸುರ ಗುಪ್ತಸವಾರಿ ಹಾಗೂ ರುದ್ರಾಭೀಷೇಕ ನೆರವೇರಲಿದೆ. ಬೆಳಿಗ್ಗೆ 6 ಗಂಟೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಜಗ್ಗಲಗಿ, ಜಾಂಝ ಮೇಳ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವವು ರಾಜಮರ್ಯಾದೆಯೊಂದಿಗೆ ಸಾಗಲಿದೆ.

​ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಧರ್ಮಗುರುಗಳಾದ ಶ್ರೀ ಶ್ರೀ ಶ್ರೀ ಗುರು ತಮ್ಮಣ್ಣ ರಾಜು ಸ್ವಾಮಿಗಳ ಸಾನ್ನಿಧ್ಯದಲ್ಲಿ ಸದ್ಭಕ್ತ ಗೊರಪ್ಪಗಳಿಂದ ಸರಪಳಿ ಪವಾಡ, ಹುಗ್ಗಿ ಪವಾಡ, ಆರತಿ ಪವಾಡ ಹಾಗೂ ಶಸ್ತ್ರ ಪವಾಡಗಳು ಜರುಗಲಿವೆ. ಇದೇ ಸಂದರ್ಭದಲ್ಲಿ ದೋಣಿ ತುಂಬಿಸುವುದು ಮತ್ತು ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಬಾಡ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಗುಡಿಯ ಶ್ರೀ ದೇವಪ್ಪಜ್ಜನವರು ಹಾಗೂ ಗ್ರಾಮದ ಸಮಸ್ತ ಭಕ್ತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಊರುಗಳ ಭಕ್ತಾದಿಗಳು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

Leave a Reply

Your email address will not be published. Required fields are marked *