
ಧಾರವಾಡ: ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಯ ದಿಕ್ಸೂಚಿಯಾಗಿರುವ 2027ರ ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನದಡಿ ಲಭ್ಯವಿರುವ ‘ಸ್ವಯಂ ಗಣತಿ’ (Self-Enumeration) ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಗಣತಿಯು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಇದು ಸುಭದ್ರ ಭಾರತದ ನಿರ್ಮಾಣಕ್ಕೆ ನಾಗರಿಕರು ನೀಡುವ ಅಳಿಲು ಸೇವೆಯಾಗಿದೆ. ಈಗಾಗಲೇ ನಾನು ನನ್ನ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15, 2026ರವರೆಗೆ ಈ ಡಿಜಿಟಲ್ ಸೌಲಭ್ಯ ಲಭ್ಯವಿದ್ದು, ನಾಗರಿಕರು ನಿಗದಿತ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆಯ ಒಟಿಪಿ ಮೂಲಕ ಲಾಗಿನ್ ಆಗಿ ವಿವರಗಳನ್ನು ಭರ್ತಿ ಮಾಡಬಹುದಾಗಿದೆ.
ಸ್ವಯಂ ಗಣತಿಯಿಂದ ಸಮಯ ಉಳಿತಾಯವಾಗುವುದಲ್ಲದೆ, ನಿಖರ ಮಾಹಿತಿ ದಾಖಲಿಸಲು ಸಹಕಾರಿಯಾಗುತ್ತದೆ. ವಿವರಗಳನ್ನು ದಾಖಲಿಸಿದ ನಂತರ ದೊರೆಯುವ ಎಸ್‌ಇ ಐಡಿ (SE ID) ಅನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ ಈ ಐಡಿ ನೀಡಿದರೆ ಅವರು ವಿವರಗಳನ್ನು ತಕ್ಷಣವೇ ದೃಢೀಕರಿಸುತ್ತಾರೆ. ‘ನನ್ನ ಗಣತಿ, ದೇಶದ ಶಕ್ತಿ’ ಎಂಬ ಮಂತ್ರದೊಂದಿಗೆ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಈ ರಾಷ್ಟ್ರೀಯ ಅಭಿಯಾನದಲ್ಲಿ ಭಾಗವಹಿಸಿ, ಸುಭದ್ರ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಚಿವರು ವಿನಂತಿಸಿದ್ದಾರೆ.

